*ರೇಣುಕಾಸ್ವಾಮಿ ಕೊಲೆ ಕೇಸ್: ಆರೋಪಪಟ್ಟಿಯಿಂದ ಪ್ರದೋಷ್ ಹೆಸರು ಡಿಲೀಟ್*: *ಇನ್ಮುಂದೆ ಆರೋಪಿ ಅಲ್ವಾ?*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಕರಣದ 14ನೇ ಆರೋಪಿ ಆಗಿದ್ದ ಪ್ರದೋಷ್ ಇದೀಗ ಮಾಫಿ ಸಾಕ್ಷಿ ಆಗಿ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಪಟ್ಟಿಯಿಂದ ಪ್ರದೋಷ್ ಅವರ ಹೆಸರನ್ನು ತೆಗೆದುಹಾಕಲಾಗಿದೆ.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಕುರಿತು ನಡೆದ ಕಾನೂನು ಪ್ರಕ್ರಿಯೆಯ ಬಳಿಕ ಸೆಪ್ಟೆಂಬರ್ 16ರಂದು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಅವರ ಅರ್ಜಿಯನ್ನು ಅಂಗೀಕರಿಸಿತ್ತು. ಬಳಿಕ ಸೆಪ್ಟೆಂಬರ್ 23ರಂದು ಕರ್ನಾಟಕ ಹೈಕೋರ್ಟ್ ಕೂಡ ಪ್ರದೋಷ್ ಅವರನ್ನು ಅಪ್ರೂವರ್ ಆಗಿ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಈ ಹಿಂದೆ ಪ್ರದೋಷ್ ಅವರನ್ನು 14ನೇ ಆರೋಪಿಯಾಗಿ ಹೆಸರಿಸಲಾಗಿತ್ತು. ಇದೀಗ ನ್ಯಾಯಾಲಯದ ಮಾಫಿ ಸಾಕ್ಷಿ ಆದೇಶದ ಹಿನ್ನೆಲೆಯಲ್ಲಿ ಅವರು ಆರೋಪಿಯಾಗಿ ಅಲ್ಲ, ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ವಿಚಾರಣೆಗೆ ಒಳಪಡಲಿದ್ದಾರೆ. ಈ ಕಾರಣದಿಂದ ಚಾರ್ಜ್‌ಶೀಟ್‌ನಿಂದ ಅವರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿರುವುದರಿಂದ ಪ್ರದೋಷ್ ತಕ್ಷಣ ಜೈಲಿನಿಂದ ಬಿಡುಗಡೆಯಾಗುವುದಿಲ್ಲ. ಪ್ರಕರಣದ ವಿಚಾರಣೆ ಮುಗಿಯುವವರೆಗೆ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ, ಪ್ರಮುಖ ಮಾಹಿತಿಯನ್ನು ಮರೆಮಾಚಿದರೆ ಅಥವಾ ಸುಳ್ಳು ಸಾಕ್ಷ್ಯ ನೀಡಿದರೆ ಮತ್ತೆ ಆರೋಪಿಯಾಗಿ ವಿಚಾರಣೆ ಎದುರಿಸುವ ಸಾಧ್ಯತೆ ಇದೆ.
ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಪ್ರದೋಷ್ ಅವರ ಭದ್ರತೆ ಹಾಗೂ ಜೈಲಿನಲ್ಲಿನ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಜೈಲು ಮೂಲಗಳು ತಿಳಿಸಿವೆ. 24 ಗಂಟೆಗಳ ಸಿಸಿಟಿವಿ ಕಣ್ಗಾವಲು, ಹೊರಗಿನಿಂದ ಬರುವ ಊಟ, ತಿಂಡಿ ಮತ್ತು ನೀರಿನ ಪರಿಶೀಲನೆ ಹಾಗೂ ಅವರನ್ನು ಭೇಟಿ ಮಾಡುವವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರದೋಷ್ ಅವರ ಹೇಳಿಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಮುಂದಿನ ಕಾನೂನು ಪ್ರಕ್ರಿಯೆ ಮೇಲೆ ಇದೀಗ ಗಮನ ನೆಟ್ಟಿದೆ.




