*ಶಾರ್ಜಾದಲ್ಲಿ ಹತ್ಯೆಯಾದ ಉಡುಪಿ ಮೂಲದ ಪ್ರಕಾಶ್ ಕುಂದರ್ ಶವ ತವರಿಗೆ*:*ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ*

ಪ್ರಗತಿವಾಹಿನಿ ಸುದ್ದಿ: ಶಾರ್ಜಾದಲ್ಲಿ ಭೀಕರವಾಗಿ ಹತ್ಯೆಗೀಡಾದ ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಕೊನೆಗೂ ತವರಿಗೆ ತಲುಪಿದೆ. ಎರಡು ತಿಂಗಳ ಸತತ ಪ್ರಯತ್ನದ ಬಳಿಕ ಕುಟುಂಬಸ್ಥರು ಶುಕ್ರವಾರ ಅಂತಿಮ ನಮನ ಸಲ್ಲಿಸಿದ್ದು, ಒಂಬತ್ತು ತುಂಡುಗಳಾಗಿದ್ದ ಮೃತದೇಹದ ಸ್ಥಿತಿ ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಮನಕಲಕುವಂತೆ ಮಾಡಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಕುಟುಂಸ್ಥರು ಒತ್ತಾಯಿಸಿದ್ದಾರೆ.
ಜುಲೈ ತಿಂಗಳ ಕೊನೆಯ ಭಾಗದಲ್ಲಿ ಶಾರ್ಜಾದಲ್ಲಿ ಪ್ರಕಾಶ್ ಕುಂದರ್ ಹತ್ಯೆಯಾಗಿತ್ತು. ಘಟನೆಯ ಬಳಿಕ ಮೃತದೇಹವನ್ನು ತವರಿಗೆ ತರಲು ಕುಟುಂಬಸ್ಥರು ಮನವಿ ಮಾಡಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರತಿನಿಧಿಗಳ ಸತತ ಪ್ರಯತ್ನದ ಬಳಿಕ ಪಾರ್ಥಿವ ಶರೀರವನ್ನು ಮುಚ್ಚಿದ ಶವಪೆಟ್ಟಿಗೆಯಲ್ಲಿ ಭಾರತಕ್ಕೆ ತರಲಾಗಿದೆ.
ಶುಕ್ರವಾರ ಮುಂಜಾನೆ ಮೃತರ ಸಹೋದರ ಪ್ರಶಾಂತ್ ಕುಂದರ್ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಶವಪೆಟ್ಟಿಗೆಯನ್ನು ಸ್ವೀಕರಿಸಿದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಕೂಡ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದು ಅಗತ್ಯ ನೆರವು ನೀಡಿದರು. ಬಳಿಕ ಅಂಬುಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಕುಂದಾಪುರದ ಮನೆಗೆ ತರಲಾಯಿತು.
ಮನೆಯಲ್ಲಿ ಧರ್ಮಗುರುಗಳು ಪ್ರಾರ್ಥನೆ ನೆರವೇರಿಸಿದ್ದು, ನೂರಾರು ಬಂಧುಗಳು ಹಾಗೂ ಸ್ಥಳೀಯರು ಅಂತಿಮ ನಮನ ಸಲ್ಲಿಸಿದರು. ಹತ್ಯೆ ನಡೆದು ಸುಮಾರು ಎರಡು ತಿಂಗಳು ಕಳೆದಿರುವುದರಿಂದ ಪೆಟ್ಟಿಗೆಯನ್ನು ತೆರೆಯದೆ ಅಂತಿಮ ದರ್ಶನ ನಡೆಸಲಾಯಿತು. ಪಾರ್ಥಿವ ಶರೀರವನ್ನು ಸಂಪೂರ್ಣವಾಗಿ ಫ್ರೀಜ್ ಮಾಡಿದ ಸ್ಥಿತಿಯಲ್ಲಿ ಭಾರತಕ್ಕೆ ರವಾನಿಸಲಾಗಿತ್ತು.
ಅಂತಿಮ ನಮನದ ಬಳಿಕ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿಯ ಪ್ರೊಟೆಸ್ಟೆಂಟ್ ಸಿಎಸ್‌ಐ ಕೃಪಾ ಧಫನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲೂ ನೂರಾರು ಬಂಧುಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಶಾರ್ಜಾದಲ್ಲಿ ನಡೆದ ಹತ್ಯೆಯ ಭೀಕರತೆ ಹಾಗೂ ಮೃತದೇಹದ ಸ್ಥಿತಿ ಸ್ಥಳೀಯರನ್ನು ದುಃಖಕ್ಕೀಡು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಭಾರತದಲ್ಲಿ ಪತ್ತೆಹಚ್ಚಿ ವಿಚಾರಣೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಶಾರ್ಜಾ ಪೊಲೀಸರ ತನಿಖೆಯೊಂದಿಗೆ ಭಾರತದಲ್ಲೂ ಅಗತ್ಯ ಕಾನೂನು ಕ್ರಮ ಕೈಗೊಂಡು ಪ್ರಕರಣದ ತನಿಖೆಗೆ ಸಹಕಾರ ನೀಡಬೇಕು. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂಬುದು ಕುಟುಂಬಸ್ಥರು ಹಾಗೂ ನಾಗರಿಕರ ಆಗ್ರಹವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




