*ವಂದೇ ಮಾತರಂ 150ನೇ ವರ್ಷಾಚರಣೆ: ಸಂತ ಮೀರಾ ಶಾಲೆಯಲ್ಲಿ ಮೊಳಗಿದ ಏಕಸ್ವರದ ಗಾನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಅಂಗವಾಗಿ ನಗರದ ಅನಗೋಳದಲ್ಲಿರುವ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ‘ನಮಾಮಿ ಭಾರತ – ಒಂದೇ ಸಮಯ, ಒಂದೇ ಲಯ, ಒಂದೇ ಸ್ವರದೊಂದಿಗೆ ಒಂದಾಗೋಣ’ ಎಂಬ ಪ್ರೇರಣಾದಾಯಕ ಪರಿಕಲ್ಪನೆಯಡಿ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಕಾರ್ಯಕ್ರಮವನ್ನು ಉತ್ಸಾಹದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೌರಭ ಕುಲಕರ್ಣಿ ಭಾಗವಹಿಸಿದ್ದರು. ಶಾಲೆಯ ಅಧ್ಯಕ್ಷರಾದ ಪರಮೇಶ್ವರ ಹೆಗಡೆ, ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣ ಭಟ್ ಹಾಗೂ ಅಶೋಕ ಶಿಂತ್ರೆ, ಸಹಾಯಕ ಮುಖ್ಯೋಪಾಧ್ಯಾಯಿನಿ ಋತುಜಾ ಜಾಧವ್, ಶಿಕ್ಷಕ ವೃಂದ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಣ್ಯರ ಹಸ್ತದಿಂದ ದೀಪಪ್ರಜ್ವಲನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸ್ವಾಗತ ಭಾಷಣ ಹಾಗೂ ಮುಖ್ಯ ಅತಿಥಿಗಳ ಪರಿಚಯ ನಡೆಯಿತು.

ಶಾಲೆಯ ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ‘ವಂದೇ ಮಾತರಂ’ ಗೀತೆಯನ್ನು ಭಾವಪೂರ್ಣವಾಗಿ ಹಾಗೂ ಏಕಸ್ವರದಲ್ಲಿ ಪ್ರಸ್ತುತಪಡಿಸಿದರು. ನೂರಾರು ವಿದ್ಯಾರ್ಥಿಗಳ ಸಾಮೂಹಿಕ ಗಾಯನದಿಂದ ಶಾಲಾ ಆವರಣವು ದೇಶಭಕ್ತಿಯ ವಾತಾವರಣದಿಂದ ಕಂಗೊಳಿಸಿತು.
ಮುಖ್ಯ ಅತಿಥಿ ಸೌರಭ ಕುಲಕರ್ಣಿ ಅವರು ಮಾತನಾಡಿ, ‘ವಂದೇ ಮಾತರಂ’ನ ಐತಿಹಾಸಿಕ ಹಾಗೂ ರಾಷ್ಟ್ರೀಯ ಮಹತ್ವವನ್ನು ವಿವರಿಸಿದರು. ರಾಷ್ಟ್ರೀಯ ಏಕತೆ, ದೇಶಭಕ್ತಿ, ಸಾಮಾಜಿಕ ಸೌಹಾರ್ದತೆ ಹಾಗೂ ಮಾತೃಭೂಮಿಯ ಮೇಲಿನ ಗೌರವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು, ದೇಶದ ಏಕತೆ ಮತ್ತು ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಪ್ರೇರೇಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ಮಾತೃಭೂಮಿಯ ಬಗೆಗಿನ ಅಭಿಮಾನವನ್ನು ಬಲಪಡಿಸಿದ ‘ನಮಾಮಿ ಭಾರತ’ ಕಾರ್ಯಕ್ರಮವು ಸಂತ ಮೀರಾ ಶಾಲಾ ಕುಟುಂಬಕ್ಕೆ ಸ್ಮರಣೀಯವಾಗಿ ಪರಿಣಮಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




