
ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆ ರಾಮ ಮಂದಿರದಲ್ಲಿ ಹುಂಡಿ ಕಾಣಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಮೂವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಪೊಲೀಸರ ಚಾರ್ಜ್ ಶೀಟ್ ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿದ್ದು, ಮೂವರನ್ನೂ ಪ್ರಕರಣದಲ್ಲಿ ಸಾಕ್ಷಿಗಳನ್ನಾಗಿ ಮಾಡಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಕಾಣಿಕೆ ಹಣ ಕಳುವಾದದ್ದು ಹೇಗೆ ಗೊತ್ತಾಯಿತು ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ. ಅಲ್ಲದೇ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಲಾಗಿದೆ.
ಜೂನ್ 3ರಂದು ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಅನುಕಲ್ಪ್ ಮಿಶ್ರಾ ಹಾಗೂ ಲವ್ ಕುಶ್ ಮಿಶ್ರಾ ಅವರು ಕಳ್ಳತನ ಮಾಡುತ್ತಿದ್ದಾಗ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದರು. ಅಂದು ಹಣ ಎಣಿಕೆ ಸಿಬ್ಬಂದಿ ಮದನ್ ಗೋಪಾಲ್ ನಿಗಮ್ ಅವರು ಈ ನಾಲ್ವರು ನೋಟಿನ ಕಂತೆಗಳನ್ನು ಅಡಗಿಸುತ್ತಿರುವುದನ್ನು ಗಮನಿಸಿದ್ದರು.
ಬಳಿಕ ಜೂನ್ 4ರಂದು ಮತ್ತೊಂದು ಕಳ್ಳತನದ ಘಟನೆ ಬೆಳಕಿಗೆ ಬಂದಿತ್ತು. ಅವಿನಾಶ್ ಶುಕ್ಲಾ ಕಳ್ಳತನ ಮಾಡುತ್ತಿದ್ದುದನ್ನು ಹಣ ಎಣಿಕೆ ಸಿಬ್ಬಂದಿ ಸಂತ ಪ್ರಸಾದ್ ವರ್ಮಾ ನೋಡಿದ್ದರು. ಬಳಿಕ ಮದನ್ ಗೋಪಾಲ್ ನಿಗಮ್ ಹಾಗೂ ಸಂತ ಪ್ರಸಾದ್ ವರ್ಮಾ ಅವರ ದೂರಿನ ಆಧಾರದ ಮೇಲೆ ಗೇಟ್‌ನಲ್ಲಿ ತಪಾಸಣೆ ಆರಂಭಿಸಲಾಗಿತ್ತು. ತಪಾಸಣೆ ವೇಳೆ ಅವಿನಾಶ್ ಶುಕ್ಲಾ ಕಳವು ಮಾಡಿದ್ದ 2.25 ಲಕ್ಷ ರೂಪಾಯಿಯನ್ನು ಬಾತ್‌ರೂಮ್‌ನಲ್ಲಿ ಅಡಗಿಸಿದ್ದ. ಶೋಧದ ವೇಳೆ ಈ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವಿವರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



