
ಪ್ರಗತಿವಾಹಿನಿ ಸುದ್ದಿ: ಎಲ್ಪಿಜಿ ಸಿಲಿಂಡರ್ ಬಳಸುವ ಗ್ರಾಹಕರಿಗೆ ಹೊಸ ನಿಯಮ ಜಾರಿಗೆ ಬರಲಿದೆ. ಸಬ್ಸಿಡಿ ಪಡೆಯುವ ಗ್ರಾಹಕರು ತಮ್ಮ ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಿದ್ದು, ಈ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸದಿದ್ದರೆ ಸಿಲಿಂಡರ್ ಬುಕಿಂಗ್ ಅಥವಾ ವಿತರಣೆ ತಕ್ಷಣ ನಿಲ್ಲುವುದಿಲ್ಲ. ಆದರೆ ಸಬ್ಸಿಡಿ ಹಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಗ್ರಾಹಕರು ಸಿಲಿಂಡರ್ಗೆ ಮಾರುಕಟ್ಟೆ ದರ ಪಾವತಿಸಬೇಕಾಗುತ್ತದೆ.
ನಕಲಿ ಹಾಗೂ ಅನರ್ಹ ಎಲ್ಪಿಜಿ ಸಂಪರ್ಕಗಳನ್ನು ಗುರುತಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. ಅರ್ಹ ಗ್ರಾಹಕರಿಗೆ ಮಾತ್ರ ಸರ್ಕಾರದ ಸಬ್ಸಿಡಿ ತಲುಪುವಂತೆ ವ್ಯವಸ್ಥೆಯನ್ನು ಬಲಪಡಿಸಲು ಈ ಪರಿಶೀಲನೆ ನಡೆಸಲಾಗುತ್ತಿದೆ.
ಸೆಪ್ಟೆಂಬರ್ 19ರ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 27.43 ಕೋಟಿಗೂ ಅಧಿಕ ಸಕ್ರಿಯ ಎಲ್ಪಿಜಿ ಗ್ರಾಹಕರು ಈಗಾಗಲೇ ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಲಾಗಿದೆ.
ಇನ್ನೂ ಪರಿಶೀಲನೆ ಪೂರ್ಣಗೊಳಿಸದ ಗ್ರಾಹಕರು ತಮ್ಮ ಸಮೀಪದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಬಹುದು. ಸಿಲಿಂಡರ್ ವಿತರಣೆ ವೇಳೆ ಬರುವ ಸಿಬ್ಬಂದಿಯ ಮೂಲಕವೂ ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಿಕೊಳ್ಳಬಹುದು.
ಇದರ ಜೊತೆಗೆ ಇಂಡಿಯನ್ಆಯಿಲ್ ಒನ್, ಹೆಲೋ ಬಿಪಿಸಿಎಲ್ ಮತ್ತು ಎಚ್ಪಿ ಪೇ ಅಧಿಕೃತ ಮೊಬೈಲ್ ಆ್ಯಪ್ಗಳ ಮೂಲಕ ಮನೆಯಲ್ಲೇ ಪರಿಶೀಲನೆ ಪೂರ್ಣಗೊಳಿಸುವ ಅವಕಾಶವೂ ಇದೆ ಎಂದು ತಿಳಿಸಲಾಗಿದೆ.
ಇನ್ನು ಎಲ್ಪಿಜಿ ಸಿಲಿಂಡರ್ ಬುಕಿಂಗ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ.
ಸಿಲಿಂಡರ್ ವಿತರಣೆ ಸಂದರ್ಭದಲ್ಲಿ ಡೆಲಿವರಿ ಆಥೆಂಟಿಕೇಷನ್ ಕೋಡ್ (DAC) ಅನ್ನು ವಿತರಣಾ ಸಿಬ್ಬಂದಿಗೆ ನೀಡುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಹೀಗಾಗಿ ಸಿಲಿಂಡರ್ ಪಡೆಯುವಾಗ ನೋಂದಾಯಿತ ಮೊಬೈಲ್ಗೆ ಬರುವ ಕೋಡ್ ಅನ್ನು ಪರಿಶೀಲಿಸಿ ನೀಡುವುದು ಗ್ರಾಹಕರಿಗೆ ಅಗತ್ಯವಾಗಲಿದೆ.
ಬಯೋಮೆಟ್ರಿಕ್ ಪರಿಶೀಲನೆ ಬಾಕಿ ಇರುವ ಗ್ರಾಹಕರು ಅಕ್ಟೋಬರ್ 1ಕ್ಕೂ ಮುನ್ನ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡರೆ ಸಬ್ಸಿಡಿ ಪಡೆಯುವಲ್ಲಿ ತೊಂದರೆ ತಪ್ಪಿಸಿಕೊಳ್ಳಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




