
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಮರದ ಕೊಂಬೆಳು ಉಂಟು ಮಾಡುವ ಅನಾಹುತ ಮನುಷ್ಯನ ಜೀವಕ್ಕೆ ಕುತ್ತಾಗಿ ಪರಿಣಮಿಸುತ್ತಿವೆ. ಬಿರುಗಾಳಿ ಮಳೆ ಸಂದರ್ಭದಲ್ಲಂತೂ ಜನರು ರಸ್ತೆಗಳಲ್ಲಿ ಜೀವ ಭಯದಲ್ಲೇ ಓಡಾಡಬೇಕಾದ ಸ್ಥಿತಿ ಇದೆ. ಯಾವಾಗ ಯಾವ ಮರದ ಕೊಂಬೆ ಮುರಿದು ಬಿದ್ದು ಇನ್ನೇನು ಅನಾಹುತ ಉಂಟಾಗುತ್ತೋ ಎಂಬ ಆತಂಕದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಇದೀಗ ಇಂತದ್ದೇ ಒಂದು ಘಟನೆಯಲ್ಲಿ ಹೈಕೋರ್ಟ್ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಗೆ ಭಾರಿ ದಂಡ ವಿಧಿಸಿದೆ.
ಬೆಂಗಳೂರು ನಗರದಲ್ಲಿ ಮರದ ಕೊಂಬೆ ಬಿದ್ದು ಅಂಗವೈಕಲ್ಯಕ್ಕೆ ತುತ್ತಾದ ಜಿ. ಚಂದನ್ ಅವರಿಗೆ ಹೈಕೋರ್ಟ್ 2.77 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಈ ಘಟನೆಯಲ್ಲಿ ಮರಗಳ ನಿರ್ವಹಣೆಯಲ್ಲಿ ಜಿಬಿಎ ತೋರಿದ ವೈಫಲ್ಯಕ್ಕೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ನಗರದಲ್ಲಿ ಮರಗಳ ಸಮರ್ಪಕ ನಿರ್ವಹಣೆ ಮಾಡದ ಮಹಾನಗರ ಪಾಲಿಕೆಯು ಈ ಘಟನೆಗೆ ಹೊಣೆ ಹೊರಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಈ ಕುರಿತು ಆದೇಶ ಹೊರಡಿಸಿದೆ. 2024ರ ಮಾರ್ಚ್ 7ರಂದು ಬೆಂಗಳೂರಿನ ಗುಡ್ ಶೆಫರ್ಡ್ ಕಾನ್ವೆಂಟ್ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಜಿ.ಚಂದನ್ ಅವರ ಮೇಲೆ ಮರದ ಕೊಂಬೆ ಮುರಿದು ಬಿದ್ದಿತ್ತು. ಪರಿಣಾಮ ಅವರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಘಟನೆಯಲ್ಲಿ ಜಿ. ಚಂದನ್ ಗಂಭೀರ ಗಾಯಗೊಂಡು, ಶೇಕಡ 85ರಷ್ಟು ಅಂಗವೈಕಲ್ಯವುಂಟಾಗಿ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ 2.27 ಕೋಟಿ ಪರಿಹಾರಕ್ಕೆ ತಾಕೀತು ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



