*14 ವರ್ಷಗಳ ಬಳಿಕ ಮತ್ತೆ ತನಿಖೆ ಚುರುಕು*: *ಸೌಜನ್ಯ ಪ್ರಕರಣದ SITಗೆ 16 ಮಂದಿ ನೇಮಕ*

ಪ್ರಗತಿವಾಹಿನಿ ಸುದ್ದಿ: ವರ್ಷಗಳ ಕಾಲ ನ್ಯಾಯಕ್ಕಾಗಿ ನಡೆದ ಹೋರಾಟದ ಬಳಿಕ ಬೆಳ್ತಂಗಡಿ ಬಾಲಕಿ ಸೌಜನ್ಯ ಸಾವಿನ ಪ್ರಕರಣದ ಮರುತನಿಖೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ 16 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತನಿಖಾ ಸಹಾಯಕರಾಗಿ ನೇಮಕ ಮಾಡಲಾಗಿದೆ.
ಸೆಪ್ಟೆಂಬರ್ 24ರಂದು ರಾಜ್ಯ ಸರ್ಕಾರ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿತ್ತು. ಇದೀಗ ಹೆಚ್ಚುವರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡಕ್ಕೆ ಸೇರ್ಪಡೆಯಾಗಿದ್ದು, ಮರುತನಿಖೆಗೆ ಅಗತ್ಯವಿರುವ ಪೊಲೀಸ್ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ.
ಪೊಲೀಸ್ ಮಹಾನಿರೀಕ್ಷಕ ಎನ್. ಶಶಿಕುಮಾರ್ SIT ಮುಖ್ಯಸ್ಥರಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತವಾರ್ತೆಯ ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಸದಸ್ಯರಾಗಿದ್ದಾರೆ.
ಇದೀಗ ತನಿಖಾ ಸಹಾಯಕರಾಗಿ ಮಂಗಳೂರು ನಗರ ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ ಬಿ., ಸಿಐಡಿ ಇನ್ಸ್‌ಪೆಕ್ಟರ್‌ಗಳಾದ ದೀಪಕ್ ಮತ್ತು ಮೋಹನ್ ಡಿ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಈಶ್ವರಿ, ಕೋಣಾಜೆ ಠಾಣೆಯ ಪಿಎಸ್ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್, ಕಂಕನಾಡಿ ಠಾಣೆಯ ಮಹಿಳಾ ಪಿಎಸ್ಐ ಅನಿತಾ ನಿಕಂ ಹಾಗೂ ಮಂಗಳೂರು ಸಿಸಿಬಿಯ ಎಎಸ್ಐ ಮೋಹನ್ ಕೂಡ ತಂಡದಲ್ಲಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆಯ ಪ್ರದೀಪ್ ಕುಮಾರ್ ರೈ, ಗೋವರ್ಧನ್, ದಿನೇಶ್ ಎನ್., ಉಳ್ಳಾಲ ಠಾಣೆಯ ರಾಧಾಕೃಷ್ಣ ಕೆ.ಕೆ., ಕಾವೂರು ಠಾಣೆಯ ರೆಜಿ ವಿ.ಎಂ., ಸುರತ್ಕಲ್ ಠಾಣೆಯ ರಾಜೇಂದ್ರ ಪ್ರಸಾದ್ ವಿ.ಪಿ. ಹಾಗೂ ಕಂಕನಾಡಿ ಠಾಣೆಯ ಮಹಿಳಾ ಸಿಬ್ಬಂದಿ ಪ್ರಮೀಳಾ ಅವರನ್ನು ಸಹ ತನಿಖಾ ಸಹಾಯಕರಾಗಿ ನೇಮಕ ಮಾಡಲಾಗಿದೆ.
ನೇಮಕಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗಳಿಂದ ತಕ್ಷಣ ಬಿಡುಗಡೆಗೊಂಡು ಬೆಂಗಳೂರಿನಲ್ಲಿರುವ SIT ತನಿಖಾ ತಂಡದ ಮುಂದೆ ವರದಿ ಮಾಡಿಕೊಳ್ಳುವಂತೆ ಡಿಜಿ&ಐಜಿಪಿ ಡಾ. ಎಂ.ಎ. ಸಲೀಂ ಸೆಪ್ಟೆಂಬರ್ 29ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.
ಇದರೊಂದಿಗೆ ಮರುತನಿಖೆ ನಡೆಸಲು SITಗೆ ಅಗತ್ಯವಿರುವ ಸಿಬ್ಬಂದಿ ವ್ಯವಸ್ಥೆ ಪೂರ್ಣಗೊಂಡಂತಾಗಿದೆ. ಮುಂದಿನ ಹಂತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಹಿಂದಿನ ತನಿಖೆಯ ಅಂಶಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸುವ ಕಾರ್ಯ ನಡೆಯಲಿದೆ.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ಸಮಿತಿಯಿಂದ ‘ನ್ಯಾಯದ ನಡಿಗೆ’ ಹಾಗೂ ಅಭಿನಂದನಾ ಸಭೆ ಆಯೋಜಿಸಲಾಗುತ್ತಿದೆ ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದ್ದಾರೆ. ಉಜಿರೆ ತಿಮರೋಡಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ.
2012ರ ಅಕ್ಟೋಬರ್ 10ರಂದು ನಡೆದ ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಸಲ್ಲಿಸಿದ್ದ SLP No. 5763/2026 ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 22ರಂದು ಪ್ರಕರಣದ ಮರುತನಿಖೆಗಾಗಿ ಹೊಸ SIT ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸರು ಹಾಗೂ ಬಳಿಕ ಸಿಬಿಐ ಪ್ರಕರಣದ ತನಿಖೆ ನಡೆಸಿದ್ದರೂ ನ್ಯಾಯ ದೊರೆತಿಲ್ಲ ಎಂಬುದು ಹೋರಾಟಗಾರರ ನಿಲುವಾಗಿದೆ. ಸುಪ್ರೀಂ ಕೋರ್ಟ್‌ನ ಮರುತನಿಖೆ ಆದೇಶದಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಕ್ಕೆ ಹೊಸ ಆಶಾಭಾವನೆ ಮೂಡಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಹಿಂದಿನ ತನಿಖೆಯ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ಹೊಸ SIT ಯಾವುದೇ ಪ್ರಭಾವ, ಒತ್ತಡ ಅಥವಾ ಪೂರ್ವಗ್ರಹಕ್ಕೆ ಒಳಗಾಗದೆ ತನಿಖೆ ನಡೆಸಬೇಕು. ನಿಜಾಂಶವನ್ನು ಹೊರತಂದು ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ.
‘ನ್ಯಾಯದ ನಡಿಗೆ’ ಹಾಗೂ ಅಭಿನಂದನಾ ಸಭೆಗೆ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮಾಧ್ಯಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಹಕರಿಸುವಂತೆ ಹೋರಾಟ ಸಮಿತಿ ಮನವಿ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



