
ಪ್ರಗತಿವಾಹಿನಿ ಸುದ್ದಿ: ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಪಡೆಯುವ ಮಹಿಳೆಯರಿಗೆ ಇನ್ಮುಂದೆ ಪ್ರತಿಬಾರಿಯೂ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ. ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದರ ಜೊತೆಗೆ ದುರ್ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಸುಮಾರು ಒಂದು ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡುವ ಉದ್ದೇಶವೂ ಸರ್ಕಾರದ ಮುಂದಿದೆ.
ಸ್ಮಾರ್ಟ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ವಿವರಗಳನ್ನು ನೀಡುವುದು ಕಡ್ಡಾಯವಾಗಲಿದೆ. ಫಲಾನುಭವಿಯ ಹೆಸರು, ಫೋಟೋ, ಆಧಾರ್ ಸಂಖ್ಯೆ ಹಾಗೂ ವಿಳಾಸದ ವಿವರಗಳು ಕಾರ್ಡ್‌ನಲ್ಲಿ ನಮೂದಾಗಲಿವೆ.
ಆರಂಭಿಕ ಹಂತದಲ್ಲಿ ಬಿಎಂಟಿಸಿ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಯೋಜಿಸಲಾಗಿದೆ. ಬಳಿಕ ಹಂತ ಹಂತವಾಗಿ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ಇತರ ಸಾರಿಗೆ ನಿಗಮಗಳ ಪ್ರಯಾಣಿಕರಿಗೂ ಕಾರ್ಡ್ ವಿತರಿಸುವ ಸಾಧ್ಯತೆ ಇದೆ. ವಿಶೇಷವೆಂದರೆ, ಈ ಸ್ಮಾರ್ಟ್ ಕಾರ್ಡ್‌ಗಳನ್ನು ‘ನಮ್ಮ ಮೆಟ್ರೋ’ ಪ್ರಯಾಣಕ್ಕೂ ಬಳಸಲು ಅವಕಾಶ ಕಲ್ಪಿಸುವ ಯೋಜನೆ ಇದೆ. ಹೀಗಾಗಿ ಒಂದೇ ಕಾರ್ಡ್ ಮೂಲಕ ಬಸ್ ಹಾಗೂ ಮೆಟ್ರೋ ಸೇವೆ ಬಳಸುವ ವ್ಯವಸ್ಥೆ ರೂಪಿಸುವ ಚಿಂತನೆ ನಡೆದಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ. ಈ ಪೈಕಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅನರ್ಹರು ಯೋಜನೆಯ ಸೌಲಭ್ಯ ಪಡೆಯದಂತೆ ತಡೆಯುವುದು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಸ್ಮಾರ್ಟ್ ಕಾರ್ಡ್ ಪಡೆಯಲು ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಸೈಬರ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಯೋಜನೆ ಇದೆ. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದಾಗಿದೆ.
ಇನ್ನು ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯೂ ಫಲಾನುಭವಿಗಳ ಅರ್ಹತೆಯೊಂದಿಗೆ ಜೋಡಣೆಯಾಗಲಿದೆ ಎಂಬ ಮಾಹಿತಿ ನೀಡಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ ಎಂಬ ಅಂಶವೂ ಚರ್ಚೆಯಲ್ಲಿದೆ. ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭವಾದ ಬಳಿಕ ಮಹಿಳೆಯರು ಬಸ್ ಪ್ರಯಾಣದ ವೇಳೆ ಪ್ರತ್ಯೇಕವಾಗಿ ಆಧಾರ್ ಕಾರ್ಡ್ ತೋರಿಸುವ ಅಗತ್ಯ ಕಡಿಮೆಯಾಗಲಿದೆ. ಫಲಾನುಭವಿಗಳ ಗುರುತಿನ ಪರಿಶೀಲನೆ ಸುಲಭವಾಗುವುದರ ಜೊತೆಗೆ ಶಕ್ತಿ ಯೋಜನೆಯ ನಿರ್ವಹಣೆಯಲ್ಲೂ ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




