HealthKarnataka NewsLife Style

*ಉಪ್ಪು, ಸಕ್ಕರೆ ಬಳಿಕ ಅಡುಗೆ ಎಣ್ಣೆ ಸರದಿ: ಅಡುಗೆ ಎಣ್ಣೆ ಮರುಬಳಕೆ ಅಪಾಯ ತಪ್ಪಿಸಲು ಮಾರ್ಗಸೂಚಿ ಪ್ರಕಟ*

TPC ಪ್ರಮಾಣ ಹೆಚ್ಚಿರುವ ಎಣ್ಣೆಯಿಂದ ಗಂಭೀರ ಆರೋಗ್ಯ ಸಮಸ್ಯೆ

ಪ್ರಗತಿವಾಹಿನಿ ಸುದ್ದಿ: ಉಪ್ಪು, ಸಕ್ಕರೆ ಬಳಿಕ ಅಡುಗೆ ಎಣ್ಣೆ ಮರುಬಳಕೆ ಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಮೂರಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿದ ಎಣ್ಣೆ ಬಳಸುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸಿ ಬಯೋಡೀಸೆಲ್ ಉತ್ಪಾದನೆಗೆ ನೀಡಲು ಸರ್ಕಾರ ಹೊಸ ಪ್ಲಾಅನ್ ರೂಪಿಸಿದೆ.

ಉಪ್ಪು ಮತ್ತು ಸಕ್ಕರೆಯ ಅತಿಯಾದ ಬಳಕೆಯ ತಡೆ ಬಳಿಕ ಇದೀಗ ಅಡುಗೆ ಎಣ್ಣೆಯ ಮರುಬಳಕೆಯಿಂದ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಹೋಟೆಲ್, ಬೇಕರಿ ಹಾಗೂ ಮನೆಗಳಲ್ಲಿ ಒಂದೇ ಎಣ್ಣೆಯನ್ನು ಪದೇಪದೇ ಕರಿಯಲು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೊಸ ಮಾರ್ಗಸೂಚಿಯ ಪ್ರಕಾರ, ಯಾವುದೇ ಕಾರಣಕ್ಕೂ ಅಡುಗೆ ಎಣ್ಣೆಯನ್ನು ಮೂರಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿ ಬಳಸಬಾರದು. ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದರಿಂದ ಅದರಲ್ಲಿ ‘ಟೋಟಲ್ ಪೋಲಾರ್ ಕಾಂಪೌಂಡ್ಸ್’ (TPC) ಪ್ರಮಾಣ ಹೆಚ್ಚಾಗುತ್ತದೆ. TPC ಪ್ರಮಾಣ ಶೇಕಡಾ 25ಕ್ಕಿಂತ ಹೆಚ್ಚಾದರೆ ಅಂತಹ ಎಣ್ಣೆ ಮಾನವ ಬಳಕೆಗೆ ತೀವ್ರ ಅಪಾಯಕಾರಿಯಾಗಿದ್ದು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೊಲೆಸ್ಟ್ರಾಲ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.

ಎಣ್ಣೆಯಲ್ಲಿ ನೀಲಿ-ಬೂದು ಬಣ್ಣದ ಹೊಗೆ ಅಥವಾ ನೊರೆ ಕಾಣಿಸಿಕೊಂಡರೆ, ಹಾಗೂ ಎಣ್ಣೆ ಕಪ್ಪಾಗಿ ಅದರ ಗಾಢತೆ ಬದಲಾದರೆ ಅದನ್ನು ತಕ್ಷಣವೇ ತ್ಯಜಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಒಮ್ಮೆ ಬಳಸಿದ ಎಣ್ಣೆಯನ್ನು ಕೇವಲ 1-2 ದಿನಗಳಲ್ಲಿ ಮುಗಿಸಬೇಕು ಹೊರತು ದೀರ್ಘಕಾಲ ಸಂಗ್ರಹಿಸಿಡಬಾರದು.

ಇನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಬೇಕರಿಗಳು ಬಳಸಿದ ಎಣ್ಣೆಯ ಸೂಕ್ತ ನಿರ್ವಹಣೆ ಮತ್ತು ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮುಂದಿನ ದಿನಗಳಲ್ಲಿ ತಪಾಸಣೆಗಾಗಿ ಎಣ್ಣೆಯ ಬಳಕೆಯ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯವಾಅಗಬಹುದು.

ಅಡುಗೆ ಎಣ್ಣೆ ಮರುಬಳಕೆಗೆ ಮಾರ್ಗಸೂಚಿ:
1.ಮನೆ ಮಟ್ಟದಲ್ಲಿ ಕರಿದ ಆಹಾರಕ್ಕೆ ಬಳಸಿದ ಎಣ್ಣೆಯನ್ನು ಫಿಲ್ಟರ್ ಮಾಡಿ, ಕರ್ರಿ ತಯಾರಿಕೆಗೆ ಬಳಸಬಹುದು, ಅದೇ ಎಣ್ಣೆಯನ್ನು ಕರಿಯಲು ಮತ್ತೆ ಬಳಸುವುದನ್ನು ತಪ್ಪಿಸಿ.
2. ನೀಲಿ-ಬೂದು ಹೊಗೆ, ಗಟ್ಟಿ ನೊರೆ, ಕಪ್ಪು, ಮಸುಕು ಅಥವಾ ಸ್ಥಿರತೆ ಬದಲಾವಣೆ ಕಂಡರೆ ಮರುಬಳಕೆಯನ್ನು ತ್ಯಜಿಸಿ.
3. ಬಳಸಿದ ಅಡುಗೆ ಎಣ್ಣೆಯನ್ನು ಒಂದು ಅಥವಾ ಎರಡು ದಿನದಲ್ಲಿ ಬಳಸಬೇಕು. ಹೆಚ್ಚು ಕಾಲ ಸಂಗ್ರಹಿಸಬೇಡಿ, ಏಕೆಂದರೆ ಬಳಸಿದ ಎಣ್ಣೆ ಹಾಳಾಗುವ ದರ ಹೆಚ್ಚು.
4. ತಾಜಾ ಎಣ್ಣೆಯ ಪಾತ್ರೆಗೆ ಬಳಸಿದ ತುಂಬಿಸಬೇಡಿ, ಪ್ರತ್ಯೇಕವಾಗಿ ಸಂಗ್ರಹಿಸಿ.
5. ಸಣ್ಣ ಪ್ರಮಾಣದ ಬಳಸಿದ ಎಣ್ಣೆ ವಿಲೇವಾರಿ ಮಾಡಲು ಎಣ್ಣೆಯನ್ನು ಮರಳು, ಮರದ ಪುಡಿ, ಬಳಸಿದ ಟವೆಲ್, ಪೇಪರ್ ಟವೆಲ್, ಆಹಾರದ ತ್ಯಾಜ್ಯದಂತಹ ಹೀರಿಕೊಳ್ಳುವ ವಸ್ತುವಿನೊಂದಿಗೆ ಬೆರೆಸಿ.
6. ಚೆಲ್ಲುವ ಸಾಧ್ಯತೆ ತಪ್ಪಿಸಿ, ನಂತರ ಕಸದ ಬುಟ್ಟಿಯಲ್ಲಿ ಎಸೆಯಿರಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button