
ಪ್ರಗತಿವಾಹಿನಿ ಸುದ್ದಿ: ಪಡಿತರ ಅಕ್ಕಿ ದಂಧೆ ಕೋರರ ಜೊತೆಯೇ ಶಾಮೀಲಾಗಿರುವ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ಲಾರಿಯನ್ನು ಜಪ್ತಿ ಮಾಡಿದ ನಂತರ ದಂಧೆಕೋರರೊಂದಿಗೆ ಶಾಮೀಲಾಗಿ ವಾಹನ ಬಿಟ್ಟು ಕಳುಹಿಸಿದ ಆರೋಪದಡಿ, ಕಲಬುರಗಿಯ ಆಳಂದ ಪೊಲೀಸ್ ಠಾಣೆಯ ಸಿಪಿಐ ಶರಣಬಸಪ್ಪ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
112 ಸಿಬ್ಬಂದಿ ವಶಕ್ಕೆ ಪಡೆದು ಆಳಂದ ಟೌನ್ ಠಾಣೆಗೆ ಒಪ್ಪಿಸಿದ್ದ ಅಕ್ಕಿ ಲಾರಿಯನ್ನು ಕಳುಹಿಸಿಕೊಡಲು ಆರೋಪಿಗಳ ಜತೆ ಡೀಲ್ ಮಾಡಿಕೊಂಡಿದ್ದ ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಡ್ಡೂರು ಶ್ರೀನಿವಾಸಲು ಅವರು ತನಿಖೆಗೆ ಆದೇಶಿಸಿದ್ದು, ತನಿಖೆಯಲ್ಲಿ ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಪಿಐ ಶರಣಬಸಪ್ಪ ಹಾಗೂ ಪೊಲೀಸ್ ಕಾನ್ಸ್ಟೇಬಲ್ಗಳಾದ (ಪಿಸಿ) ಹಣಮಂತ್, ಮಲ್ಲಿಕಾರ್ಜುನ ಮತ್ತು ಸಾಯಬಣ್ಣ ಅಮಾನತುಗೊಂಡವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



