CrimeKannada NewsKarnataka News

*ದೇವಸ್ಥಾನಕ್ಕೆ ತೆರಳುತ್ತಿದ್ದ ತಾತ, ಇಬ್ಬರು ಮೊಮ್ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವು*

ಪ್ರಗತಿವಾಹಿನಿ ಸುದ್ದಿ: ದೇವಸ್ಥಾನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಚಿಂತಾಮಣಿ ತಾಲೂಕಿನ ಹುಸೇನಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು 60 ವರ್ಷದ ಮುನಿನಾರಾಯಣಪ್ಪ ಹಾಗೂ ಅವರ ಮೊಮ್ಮಕ್ಕಳಾದ 9 ವರ್ಷದ ಯಶ್ವಿನ್ ಮತ್ತು 8 ವರ್ಷದ ಪ್ರಜ್ವಲ್ ಎಂದು ಗುರುತಿಸಲಾಗಿದೆ.

 ಹುಸೇನಪುರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದರ್ಶನಕ್ಕೆಂದು ಮುನಿನಾರಾಯಣಪ್ಪ ಅವರು ಇಬ್ಬರು ಮೊಮ್ಮಕ್ಕಳನ್ನು ಕರೆದುಕೊಂಡು ತೆರಳುತ್ತಿದ್ದರು. ಮಾರ್ಗಮಧ್ಯೆ ಕೈ-ಕಾಲು ತೊಳೆಯಲು ಕೃಷಿ ಹೊಂಡದ ಬಳಿ ತೆರಳಿದಾಗ ಬಾಲಕನೊಬ್ಬ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾನೆ.

ಮೊಮ್ಮಗನನ್ನು ರಕ್ಷಿಸಲು ಮತ್ತೊಬ್ಬ ಬಾಲಕ ಹಾಗೂ ತಾತ ನೀರಿಗೆ ಇಳಿದಿದ್ದು, ಈ ವೇಳೆ ಮೂವರೂ ನೀರಿನಲ್ಲಿ ಮುಳುಗಿದ್ದಾರೆ. ಹೊಂಡ ಆಳವಾಗಿದ್ದ ಕಾರಣ ಈಜಲು ಸಾಧ್ಯವಾಗದೆ ಮೂವರೂ ಮೃತಪಟ್ಟಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ಕುಟುಂಬದ ಮೂವರು ದುರಂತವಾಗಿ ಮೃತಪಟ್ಟಿರುವುದು ಹುಸೇನಪುರ ಗ್ರಾಮದಲ್ಲಿ ಆಘಾತ ಹಾಗೂ ಶೋಕಕ್ಕೆ ಕಾರಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button