*ವಿಜಯೇಂದ್ರ ಸಮ್ಮುಖದಲ್ಲೇ ಬಿಜೆಪಿ ಬಣ ಬಡಿದಾಟ*: *‘ನಾನೇ ಗುಬ್ಬಿಯಿಂದ ಸ್ಪರ್ಧಿಸ್ತೇನೆ’ ಎಂದು ವಾರ್ನಿಂಗ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲೇ ಪಕ್ಷದ ಎರಡು ಬಣಗಳ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ. ಕಾರ್ಯಕ್ರಮದ ವೇದಿಕೆಯಲ್ಲೇ ಆರಂಭವಾದ ಮಾತಿನ ಚಕಮಕಿ ಬಳಿಕ ಕಾರ್ಯಕರ್ತರ ನಡುವೆ ಗಲಾಟೆಯಾಗಿ, ಪರಿಸ್ಥಿತಿ ತಿಳಿಗೊಳಿಸಲು ವಿಜಯೇಂದ್ರ ಮಧ್ಯಪ್ರವೇಶಿಸಬೇಕಾಯಿತು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಬೂತ್ ಅಭಿಯಾನ ನಡೆಯುತ್ತಿದ್ದ ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಸ್.ಡಿ. ದಿಲೀಪ್ ಕುಮಾರ್ ಹಾಗೂ ಟಿಕೆಟ್ ಆಕಾಂಕ್ಷಿ ಗ್ಯಾಸ್ ಚಂದ್ರಶೇಖರ್ ಬಾಬು ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
ಗ್ಯಾಸ್ ಬಾಬು ಭಾಷಣ ಮಾಡುತ್ತಿದ್ದ ವೇಳೆ ದಿಲೀಪ್ ಕುಮಾರ್ ಹೆಸರು ಪ್ರಸ್ತಾಪಿಸದಿರುವುದು ಗಲಾಟೆಗೆ ಕಾರಣವಾಗಿದೆ. ದಿಲೀಪ್ ಕುಮಾರ್ ಹೆಸರು ಹೇಳುವಂತೆ ಬೆಂಬಲಿಗರು ಒತ್ತಾಯಿಸಿ, ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಕೋಪಗೊಂಡ ಗ್ಯಾಸ್ ಬಾಬು ವೇದಿಕೆಯಿಂದ ಕೆಳಗಿಳಿದು ದಿಲೀಪ್ ಕುಮಾರ್ ಬೆಂಬಲಿಗರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ.
ಕಾರ್ಯಕರ್ತರು ಕಿತ್ತಾಡಿಕೊಳ್ಳುತ್ತಿರುವುದನ್ನು ಕಂಡ ವಿಜಯೇಂದ್ರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದರೆ ತಾವೇ ಗುಬ್ಬಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. “ನಾವೆಲ್ಲ ವರ್ಷಾನುಗಟ್ಟಲೆ ದುಡಿದು ಕಟ್ಟಿದರೆ, ನೀವು ನಿಮಿಷದಲ್ಲಿ ಹಾಳು ಮಾಡುತ್ತೀರಾ” ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲಪಡಿಸುವ ಸಂದರ್ಭದಲ್ಲಿ ನಡೆದ ಈ ಬಣ ಬಡಿದಾಟ ಇದೀಗ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




