*ಮದ್ಯದ ಅಮಲಿನಲ್ಲಿ ಜಾಗ್ವಾರ್ ಅವಾಂತರ*: *ಪೆಟ್ರೋಲ್ ಬಂಕ್ಗೆ ಡಿಕ್ಕಿ, ಕಾರು-ಪಂಪ್ ಬೆಂಕಿಗಾಹುತಿ*

ಪ್ರಗತಿವಾಹಿನಿ ಸುದ್ದಿ: ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಚಲಾಯಿಸುತ್ತಿದ್ದ ಜಾಗ್ವಾರ್ ಕಾರು ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಪೆಟ್ರೋಲ್ ಪಂಪ್ಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿರುವ ಹೆಚ್ಪಿ ಪೆಟ್ರೋಲ್ ಬಂಕ್ನಲ್ಲಿ ಘಟನೆ ನಡೆದಿದೆ. ಸಂಜಯ್ ಎಂಬಾತ ಯುವತಿಯೊಬ್ಬಳೊಂದಿಗೆ ಜಾಗ್ವಾರ್ ಕಾರಿನಲ್ಲಿ ಬಂಕ್ಗೆ ಬಂದಿದ್ದ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿದ್ದ ಸಂಜಯ್ ಏಕಾಏಕಿ ಕಾರನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ರಭಸವಾಗಿ ಪೆಟ್ರೋಲ್ ಪಂಪ್ಗೆ ಅಪ್ಪಳಿಸಿದೆ.
ಡಿಕ್ಕಿಯ ರಭಸಕ್ಕೆ ಕಿಡಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಕಾರು ಹಾಗೂ ಪೆಟ್ರೋಲ್ ಪಂಪ್ಗೆ ಬೆಂಕಿ ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಸಂಜಯ್ ಹಾಗೂ ಯುವತಿ ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಡಿಕ್ಕಿಯಿಂದ ಗುಡ್ಡು ಕುಮಾರ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುವಿಗೆ ಚಿಕಿತ್ಸೆ ಮುಂದುವರಿದಿದೆ.
ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಹಾಗೂ ತಮಿಳುನಾಡಿನ ಹೊಸೂರು ಭಾಗದಿಂದ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಸತತ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಾಗ್ವಾರ್ ಚಾಲನೆ ಮಾಡುತ್ತಿದ್ದ ಸಂಜಯ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕಾರಣ ಹಾಗೂ ಚಾಲಕನ ಸ್ಥಿತಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



