Film & EntertainmentKannada NewsKarnataka NewsLatest

*ರೇಣುಕಾಸ್ವಾಮಿ ಕೊಲೆ ಪ್ರಕರಣ*: *ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧದ ವಿಚಾರಣೆ ತೀವ್ರಗೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯವು ನಟರಾದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯಗೆ ಸಮನ್ಸ್ ಜಾರಿಗೊಳಿಸಿದ್ದು, ಅಕ್ಟೋಬರ್ 15ರಂದು ಖುದ್ದಾಗಿ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ.

ರೇಣುಕಾಸ್ವಾಮಿ ಹತ್ಯೆ ನಡೆದ 2024ರ ಜೂನ್ 8ರಂದು ದರ್ಶನ್ ಆರ್‌ಆರ್ ನಗರದ ಸ್ಟೋನಿಬ್ರೂಕ್ ರೆಸ್ಟೋರೆಂಟ್‌ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದೇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಇದ್ದರು.

ಪ್ರಕರಣದ ತನಿಖಾಧಿಕಾರಿಗಳು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಚಿಕ್ಕಣ್ಣ ಅವರನ್ನು ಪ್ರಮುಖ ಸಾಕ್ಷಿಯಾಗಿ ಸೇರಿಸಲಾಗಿದೆ. ಹತ್ಯೆಗೂ ಮುನ್ನ ದರ್ಶನ್ ಎಲ್ಲಿದ್ದರು, ಯಾರ ಜೊತೆಗಿದ್ದರು ಹಾಗೂ ಆ ಸಮಯದಲ್ಲಿ ನಡೆದ ಬೆಳವಣಿಗೆಗಳ ಕುರಿತು ಚಿಕ್ಕಣ್ಣ ಅವರ ಹೇಳಿಕೆ ತನಿಖೆಯ ದೃಷ್ಟಿಯಿಂದ ಮಹತ್ವ ಪಡೆದಿದೆ.

ತನಿಖೆಯ ಸಂದರ್ಭದಲ್ಲಿ ಚಿಕ್ಕಣ್ಣ ಪೊಲೀಸರ ಮುಂದೆ ಹಾಜರಾಗಿ ಮಾಹಿತಿ ನೀಡಿದ್ದರು. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಸ್ವಯಂಪ್ರೇರಿತ ಹೇಳಿಕೆಯನ್ನೂ ದಾಖಲಿಸಿದ್ದರು.

ಇದೀಗ ಪ್ರಕರಣದ ನ್ಯಾಯಾಲಯದ ವಿಚಾರಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ಚಿಕ್ಕಣ್ಣ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ದರ್ಶನ್ ಜೊತೆ ಆಪ್ತ ಒಡನಾಟ ಹೊಂದಿದ್ದರು. ಆದರೆ ಪ್ರಕರಣದಲ್ಲಿ ಚಿಕ್ಕಣ್ಣ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಇಬ್ಬರ ನಡುವಿನ ಸಂಬಂಧದ ಬಗ್ಗೆಯೂ ಚರ್ಚೆಗೆ ಕಾರಣವಾಗಿವೆ.

ದರ್ಶನ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಮತ್ತೊಂದೆಡೆ ದರ್ಶನ್ ಆಪ್ತ ಪ್ರದೋಷ್ ಈಗಾಗಲೇ ಮಾಫಿ ಸಾಕ್ಷಿಯಾಗಲು ಅನುಮತಿ ಪಡೆದಿದ್ದು, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಅಕ್ಟೋಬರ್ 15ರಂದು ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ನ್ಯಾಯಾಲಯಕ್ಕೆ ಹಾಜರಾದ ಬಳಿಕ ಯಾವ ವಿಚಾರಗಳ ಕುರಿತು ಹೇಳಿಕೆ ದಾಖಲಿಸಲಿದ್ದಾರೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button