*ಬೇಡ್ತಿ-ಅಘನಾಶಿನಿ ಯೋಜನೆ ಕೈ ಬಿಡುವಂತೆ ಆಗ್ರಹಿಸಿ 11 ನಿರ್ಣಯ ಮಾಡಿದ ಪ್ರತಿಭಟನಾ ಸಭೆ*

ಬೇಡ್ತಿ-ಅಘನಾಶಿನಿ ಯೋಜನೆ ಕೈ ಬಿಡುವಂತೆ ಆಗ್ರಹಿಸಿ 11 ನಿರ್ಣಯ ಮಾಡಿದ ಪ್ರತಿಭಟನಾ ಸಭೆ
ಪ್ರಗತಿವಾಹಿನಿ ಸುದ್ದಿ/
ಬೆಂಗಳೂರು: ಉತ್ತರ ಕನ್ನಡದ ಜೀವ ನದಿಗಳಾದ ಬೇಡ್ತಿ-ಅಘನಾಶಿಸಿನಿ ಉಳಿವಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ 11 ಪ್ರಮುಖ ನಿರ್ಧಾರಗಳನ್ನು ಒಕ್ಕೋರಲಿನಿಂದ ತೆಗೆದುಕೊಳ್ಳಲಾಗಿದೆ.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಜನಾಕ್ರೋಶದ ಸಭೆಯಲ್ಲಿ ಬೆಂಗಳೂರಿನಲ್ಲಿರುವ ಸಾವಿರಾರು ಉತ್ತರ ಕನ್ನಡದ ಮಂದಿ ಭಾಗವಹಿಸಿದ್ದರು. ಈ ಮೂಲಕ ಯೋಜನೆಗೆ ಸಂಬಂಧಿಸಿ ಸರ್ಕಾರದ ಕಡೆಯಿಂದ ನಡೆಯುತ್ತಿರುವ ಡಿಪಿಎಆರ್ನ್ನು ಕೂಡಲೇ ರದ್ದುಪಡಿಸಿ, ಉತ್ತರ ಕನ್ನಡದ ನದಿಗಳು ಹಾಗೂ ಜನರ ಜೀವ ಸಂರಕ್ಷಿಸಬೇಕು ಎನ್ನುವ ನಿರ್ಣಯ ಕೈಗೊಂಡರು.

ಪ್ರತಿಭಟನಾ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಶಾಸಕರಾದ ಭೀಮಣ್ಣ ನಾಯ್ಕ್, ಪರಿಸರ ಹೋರಾಟಗಾರ ಯಲ್ಲಪ್ಪ ರೆಡ್ಡಿ, ವಿಜ್ಞಾನಿ ಟಿ.ವಿ ರಾಮಚಂದ್ರ, ಕಡಲಜೀವಿ ಶಾಸ್ತ್ರಜ್ಞ ಎ.ಎನ್ ನಾಯಕ್, ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ, ಸಾಹಿತಿ ಜಯಂತ್ ಕಾಯ್ಕಿಣಿ, ಹಿರಿಯರಾದ ತೇಜಸ್ವಿನಿ ಅನಂತ್ಕುಮಾರ್, ಶಾಂತಾರಾಮ ಸಿದ್ಧಿ, ನಟರಾದ ನೀರ್ನಳ್ಳಿ ರಾಮಕೃಷ್ಣ, ಶಂಕರ್ ಭಟ್, ಲಕ್ಷ್ಮೀ ಹೆಗಡೆ, ಅರವಿಂದ ನಾಯಕ್, ನೀರಾವರಿ ತಜ್ಞರಾದ ವಿ.ಆರ್. ಹೆಗಡೆ, ಶ್ರೀನಿವಾಸ ರೆಡ್ಡಿ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸಾಮಾಜಿಕ ಹೋರಾಟಗಾರ್ತಿ ಸುಷ್ಮಾ ರೆಡ್ಡಿ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಬೆಂಗಳೂರು ವಿಭಾಗದ ಪ್ರಮುಖರಾದ ಎಸ್.ಎಂ ಹೆಗಡೆ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಸತೀಶ ಹೆಗಡೆ ಹುಳಗೋಳ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಸಂಘಟಕ ನರಸಿಂಹ ಹೆಗಡೆ, ಯಲ್ಲಾಪುರದ ಧುರೀಣ ವಿವೇಕ ಹೆಬ್ಬಾರ ಸೇರಿ ಇತರ ಗಣ್ಯರು ಪ್ರತಿಭಟನೆಗೆ ಸಾಥ್ ನೀಡಿದರು.
ನ್ಯಾ.ಸಂತೋಷ್ ಹೆಗಡೆ ಮಾತನಾಡಿ, ಬೇಡ್ತಿ-ಅಘನಾಶಿನಿ ನದಿಯ ಜನರಿಗೆ ಅಗತ್ಯವಿರುವ ನೀರಿನ ಬಗ್ಗೆ ಮೊದಲು ಅಧ್ಯಯನ ಮಾಡಬೇಕಿದೆ. ಈ ಕುರಿತ ಯಾವುದೇ ಅಧ್ಯಯನವನ್ನು ಮಾಡದೇ ಯೋಜನೆ ಮಾಡುವುದು ದೊಡ್ಡ ಅನ್ಯಾಯವಾಗುತ್ತದೆ. ಸರ್ಕಾರವು ಬಲಶಾಲಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡುವುದು ಕೇವಲ ಕಾನೂನಿಗೆ ವಿರುದ್ಧವಲ್ಲ, ಬದಲಿಗೆ ಮಾನವೀಯತೆಗೆ ವಿರುದ್ಧವಾದ ಕೆಲಸವಾಗುತ್ತದೆ. ಹೀಗಾಗಿ ಈ ಹೋರಾಟದಲ್ಲಿ ಎಂದೆಂದಿಗೂ ನಾನು ಜಿಲ್ಲೆಯ ಜನರೊಂದಿಗೆ ಇರುತ್ತೇನೆ ಎಂದು ಘೋಷಿಸಿದರು.
ನೈಸರ್ಗಿಕ ಸೃಷ್ಟಿಯನ್ನು ಕಾಪಾಡುವುದು ಕೇವಲ ಒಂದು ಜಿಲ್ಲೆಯ ಜನರ ಕೆಲಸವಲ್ಲ. ಬದಲಾಗಿ ಪಶ್ಚಿಮ ಘಟ್ಟ ಹಾಗೂ ಅಲ್ಲಿಯ ನದಿಗಳನ್ನು ಸಂರಕ್ಷಿಸುವುದು ಇಡೀ ರಾಜ್ಯ ಹಾಗೂ ದೇಶದ ನಾಗರಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಏಕಮುಖವಾಗಿ ಆಲೋಚಿಸದೇ, ಎಲ್ಲರಿಗೂ ನ್ಯಾಯ ಕೊಡಿಸುವ ರೀತಿಯಲ್ಲಿ ಸರ್ಕಾರಗಳು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತ್ಕುಮಾರ್ ಮಾತನಾಡಿ, ಸಮುದ್ರಕ್ಕೆ ಸೇರುವ ನೀರು ವ್ಯರ್ಥ ಎನ್ನುವ ಆಲೋಚನೆಯೇ ತಪ್ಪು. ಅಭಿವೃದ್ಧಿಯ ವ್ಯಾಖ್ಯಾನವೇ ಬದಲಾದಾಗ ಇಂತಹ ಅಪಾಯಗಳನ್ನು ನಾವು ಎದುರಿಸಬೇಕಾಗುತ್ತದೆ. ಹಾಗೆಯೇ ಪರಿಸರ ಹೋರಾಟದ ದಿಕ್ಕು ಹಾಗೂ ವೇಗವನ್ನು ಬದಲಿಸಬೇಕಿದೆ. ಪರಿಸರ ರಕ್ಷಣೆ ಎನ್ನುವುದು ದೇವರ ಕುರಿತ ಕೆಲಸದಂತಾಗಬೇಕು. ಇದೇ ರೀತಿ ಮುಂದುವರಿದರೆ ಸರ್ಕಾರಗಳು ರಹಸ್ಯವಾಗಿ ಯೋಜನೆಗಳನ್ನು ತಂದು, ನದಿ ನೀರುಗಳು ಸಮುದ್ರವನ್ನೇ ಸೇರದಂತೆ ಮಾಡುತ್ತವೆ ಎಂದು ಅಸಮಾಧಾನ ಹೊರಹಾಕಿದರು.

ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ಮಾತನಾಡಿ, ನದಿ ತಿರುವು ಮಾಡಲು ಹೊರಟವರ ಸಂತತಿಯು ಭವಿಷ್ಯದಲ್ಲಿ ಉಳಿಯಲಾದರೂ, ಈ ನದಿಗಳು ಜೀವಂತವಾಗಿರಬೇಕು. ಪ್ರಾಣಿಗಳ ಮೇಲೆ ಇರುವ ದಯೆಯು ನದಿ ಹಾಗೂ ಅಲ್ಲಿ ವಾಸಿಸುವ ಜನರ ಮೇಲೂ ಇರಲಿ. ಹಾಗೆಯೇ ನದಿಗಳು ಪಶ್ಚಿಮ ಘಟ್ಟದ ಹೃದಯಿದ್ದಂತೆ. ಈ ಹೃದಯವನ್ನು ತೆಗೆದು ದೇಹದ ಇನ್ನೊಂದು ಭಾಗಕ್ಕೆ ಕಸಿ ಮಾಡಲು ಸಾಧ್ಯವಿಲ್ಲ. ಒಂದಿಷ್ಟು ಜಿರಳೆಗಳು ಮಾಡುವ ಸದ್ದಿಗೆ ಕಿವಿಗೊಡುವ ಸರ್ಕಾರವು, ಉತ್ತರ ಕನ್ನಡದ ಪರಿಸರ ಪ್ರೇಮಿ ಜನರ ನೋವಿಗೆ ಸ್ಪಂದಿಸಬೇಕು. ಕಾಡು ಹಾಗೂ ಮನುಷ್ಯರ ರಕ್ಷಣೆಗಾಗಿ ಬೀದಿಗಿಳಿಯುವ ಪರಿಸ್ಥಿತಿಯನ್ನು ಸರ್ಕಾರ ತಂದಿಟ್ಟಿರುವುದು ದೊಡ್ಡ ದುರಂತ ಎಂದು ಅಭಿಪ್ರಾಯಪಟ್ಟರು.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ, ಈ ಯೋಜನೆಯನ್ನು ಜಾರಿ ಮಾಡುವಾಗ ಅಥವಾ ಡಿಪಿಆರ್ ಹಂತಕ್ಕೆ ಹೋಗುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಥಳೀಯರ ಅಭಿಪ್ರಾಯ ಪಡೆಯಬೇಕಿತ್ತು. ಯಾರದ್ದೋ ಸ್ವಾರ್ಥ್ಯಕ್ಕೆ ನದಿ ತಿರುವು ಯೋಜನೆ ಮಾಡುವುದು ಹಾಗೂ ಉತ್ತರ ಕನ್ನಡದ ಜನರನ್ನು ಬಲಿ ಹಾಕುವುದು ಸರಿಯಲ್ಲ. ಮೊದಲು ಅಂಥವರ ಮನಸ್ಸನ್ನು ತಿರುಗಿಸುವ ಕೆಲಸ ಆಗಬೇಕಿದೆ. ಉತ್ತಮ ಮಳೆಯಿಲ್ಲದಿದ್ದರೆ ಈಗಲೇ ಆ ನದಿಗಳಲ್ಲಿ ನೀರಿಲ್ಲದೇ, ಶಿರಸಿಯಂಥ ಭಾಗಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಹೀಗಾಗಿ ಕೂಡಲೇ ಡಿಪಿಎಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಸೂಕ್ತ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಶಾಂತಾರಾಮ್ ಸಿದ್ದಿ ಮಾತನಾಡಿ, ಜನರ ಮಧ್ಯೆ ಇರುವ ನದಿಯನ್ನು ತಿರುವು ಮಾಡುವುದರಿಂದ ಉತ್ತರ ಕನ್ನಡದ ನೈಸರ್ಗಿಕ ಸಮತೋಲನಕ್ಕೆ ಹಾನಿಯಾಗುತ್ತದೆ. ನಾವು ಮಲೆನಾಡಿನ ಜನರು ನಾಲ್ಕು ದಶಕದಿಂದ ತಾಳ್ಮೆಯಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಮಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಯೋಜನೆ ಅಸಲಿಯತ್ತು ಬಿಚ್ಚಿಟ್ಟ ವಿಜ್ಞಾನಿ
ಎತ್ತಿನಹೊಳೆ ಯೋಜನೆಯ ಪ್ರಸ್ತಾಪ ಮಾಡಿದಾಗ ನಾನು ವಿರೋಧ ಮಾಡಿದ್ದೆ. ಅಲ್ಲಿ ಸಿಗುವ 12.85 ಟಿಎಂಸಿ ನೀರಿನಲ್ಲಿ 12 ಟಿಎಂಸಿ ನೀರು ಸ್ಥಳೀಯ ಬಳಕೆಗೆ ಬೇಕಾಗಿದೆ. ಕೇವಲ 0.85 ಟಿಎಂಸಿ ನೀರಿಗಾಗಿ ₹24 ಸಾವಿರ ಕೋಟಿ ಬೃಹತ್ ಯೋಜನೆ ಮಾಡಲಾಗುತ್ತಿದೆ. ಈಗದೇ ಕುತಂತ್ರದ ಯೋಜನೆಯನ್ನು ಉತ್ತರ ಕನ್ನಡದಲ್ಲಿ ಮಾಡುವ ಪ್ರಯತ್ನ ಶುರುವಾಗಿದೆ ಎಂದು ಐಐಎಸ್ಸಿಯ ಹಿರಿಯ ವಿಜ್ಞಾನಿ ಟಿ.ವಿ ರಾಮಚಂದ್ರ ಅವರು ಹೇಳಿದರು.
ಈ ದೇಶದ ಪಶ್ಚಿಮ ಘಟ್ಟಗಳು 24 ಕೋಟಿ ಜನರಿಗೆ ನೀರುಣಿಸುತ್ತಿದೆ. ಪಶ್ಚಿಮ ಘಟ್ಟದಲ್ಲಿ ಮಳೆ ಬಂದು, ಅಲ್ಲಿಯ ನದಿಗಳಲ್ಲಿ ನೀರು ಹರಿದರೆ ಮಾತ್ರ ಹಲವು ರಾಜ್ಯಗಳ ಜನರು ಬದುಕಲು ಸಾಧ್ಯವಿದೆ. ಆದರೆ ಅದೇ ಭಾಗದ ಅರಣ್ಯ, ನದಿಗಳನ್ನು ನಾಶ ಪಡಿಸುವ ಯೋಜನೆಯನ್ನು ಸರ್ಕಾರವು ತಂದರೆ, ದೊಡ್ಡ ಅಪಾಯವನ್ನು ಮೈಮೇಲೆ ಹಾಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನದಿ ತಿರುವಿನಂಥ ಅಪಾಯಕಾರಿ ಯೋಜನೆಯ ಬದಲಿಗೆ, ಸ್ಥಳೀಯವಾಗಿ ಅರಣ್ಯ ಸಂವರ್ಧನೆ ಹಾಗೂ ಕೆರೆ-ಕುಂಟೆ ಭರ್ತಿ ಮಾಡುವ ಕೆಲಸವನ್ನು ಮಾಡಬೇಕಿದೆ. ಬೆಂಗಳೂರಿನಲ್ಲಿ ಸುರಿಯುವ 800 ಮಿ.ಮೀ ಮಳೆ ಹಾಗೂ ಬಯಲು ಸೀಮೆಯಲ್ಲಿ ಬರುವ ಮಳೆಯನ್ನು ರಕ್ಷಿಸಿಕೊಳ್ಳುವ ಕೆಲಸ ಮಾಡಲಾಗುತ್ತಿಲ್ಲ. ಬೆಂಗಳೂರಿನಲ್ಲಿ ಮಳೆ ನೀರು ಕೊಯ್ಲು ಹಾಗೂ ಕೆರೆ ತುಂಬಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಿದರೆ ಶೇ.60ಕ್ಕೂ ಅಧಿಕ ನೀರಿನ ಬೇಡಿಕೆಯನ್ನು ಪೂರೈಸಬಹುದು. ಹಾಗೆಯೇ ಪಕ್ಕದ ಜಿಲ್ಲೆಗಳಲ್ಲೂ ಅಲ್ಲಿ ಬರುವ ಮಳೆಯಿಂದ ನೀರು ಸಂಗ್ರಹಿಸಿದರೂ ಎತ್ತಿನಹೊಳೆ ರೀತಿಯ ಪರಿಸರಕ್ಕೆ ಮಾರಕವಾದ ಯೋಜನೆ ಅಗತ್ಯವಿರುವುದಿಲ್ಲ. ಇದಲ್ಲದೇ ಬೆಂಗಳೂರಿನ ಸಾರಕ್ಕಿ ಕೆರೆಯೊಂದರ ರಕ್ಷಣೆಯಿಂದ ಸುತ್ತಮುತ್ತಲು ಅಂತರ್ಜಲ ಮಟ್ಟವು 300 ಅಡಿ ಹೆಚ್ಚಾಗುವುದರ ಜೊತೆಗೆ, ಅಲ್ಲಿ ತಾಪಮಾನವು 2 ಡಿಗ್ರೀ ಕಡಿಮೆಯಿದೆ ಎಂದು ತಮ್ಮ ವೈಜ್ಞಾನಿಕ ವರದಿಯ ಮಾಹಿತಿ ನೀಡಿದರು.
ಸ್ವರ್ಣವಲ್ಲಿ ಶ್ರೀಗಳ ಸಂದೇಶ
ಧರಣಿಯಲ್ಲಿ ಅನಿವಾರ್ಯ ಕಾರಣಗಳಿಂದ ಭಾಗವಹಿಸಲಾಗದಿದ್ದರೂ, ಸಂದೇಶದ ರೂಪದಲ್ಲಿ ಹೇಳಿಕೆಯನ್ನು ಸ್ವರ್ಣವಲ್ಲಿ ಸಂಸ್ಥಾನ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕಳುಹಿಸಿಕೊಟ್ಟಿದ್ದರು. ʼಈ ಕಾರ್ಯಕ್ರಮದಲ್ಲಿ ಒಂದಿಷ್ಟು ಸಾವಿರ ಜನರು ಕಾಣಿಸಿಕೊಂಡಿದ್ದರೂ, ಅದು ನಮ್ಮ ಜಿಲ್ಲೆಯ ಲಕ್ಷ ಲಕ್ಷ ಜನರ ಬೆಂಬಲದ ಪ್ರತೀಕವಾಗಿದೆ. ಈ ನದಿಗಳಲ್ಲಿ ನೀರು ಇಲ್ಲ ಎನ್ನುವುದನ್ನು ವಿಜ್ಞಾನಿಗಳು ಅನೇಕ ಸಲ ಸಾಬೀತುಪಡಿಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಉತ್ತರ ಕನ್ನಡವು ಜಲಕ್ಷಾಮ ಎದುರಿಸಬೇಕಾಗುತ್ತದೆ. ಇದಲ್ಲದೇ ಯಾವುದೋ ಒಂದು ಭಾಗಕ್ಕೆ ನೀರು ಕೊಂಡೊಯ್ಯುತ್ತೇನೆ ಎಂದು ಸರ್ಕಾರ ಹೇಳಿದರೂ, ಭವಿಷ್ಯದಲ್ಲಿ ಅಲ್ಲಿಗೂ ಆ ಯೋಜನೆ ತಲುಪುವುದೇ ಪ್ರಯೋಜನವಿಲ್ಲದಂತಾಗುತ್ತದೆ. ಯಾವುದೇ ಒಬ್ಬ ವಿಜ್ಞಾನಿಯ ಸಮ್ಮತಿಯೂ ಇಲ್ಲದ ಈ ಯೋಜನೆಯನ್ನು ಸರ್ಕಾರ ಏಕೆ ಮಾಡುತ್ತಿದೆ ಎನ್ನುವುದನ್ನು ನಾವು ಪ್ರಶ್ನಿಸಲೇಬೇಕಿದೆʼ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ʼಬಯಲುಸೀಮೆಯ ಜನರಿಗೆ ಇದು ಅರ್ಥವಾಗಲಿದೆ. ನಾವು ಅವರಿಗೆ ನೀರು ಕೊಡಬಾರದು ಎಂದು ಹೇಳುವುದಿಲ್ಲ. ಆದರೆ ಯೋಜನೆಯಿಂದ ಅವರಿಗೆ ಪ್ರಯೋಜನವಿಲ್ಲ, ನಮಗೂ ಪ್ರಯೋಜನವಿಲ್ಲ. ಇದು ಅತ್ಯಂತ ನ್ಯಾಯಯುತ, ವೈಜ್ಞಾನಿಕ, ಸತ್ಯದ ಪರವಾದ ಹೋರಾಟ. ಇದೊಂದು ಸತ್ಯಾಗ್ರಹವಾಗುತ್ತಿದೆ. ಇನ್ನಾದರೂ ಸರ್ಕಾರವು ಕಣ್ತೆರೆದು ಉತ್ತರ ಕನ್ನಡದ ಜನರ ಅಹವಾಲು ಸ್ವೀಕರಿಸಲಿʼ ಎಂದು ಶ್ರೀಗಳು ಆಗ್ರಹಿಸಿದ್ದಾರೆ.
ವಿದೇಶದಿಂದ ಕಾಗೇರಿ ಸಂದೇಶ
ವಿಶ್ವಸಂಸ್ಥೆಯಲ್ಲಿನ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಸಂದೇಶ ಕಳುಹಿಸಿದ್ದರು. ನಮ್ಮ ಪಶ್ಚಿಮ ಘಟ್ಟಗಳು ಈ ನಾಡಿನ ಅತಿ ದೊಡ್ಡ ಜೀವಸಂಪತ್ತು; ನಮ್ಮ ನದಿಗಳು ನಮ್ಮ ಬದುಕಿನ ಜೀವನಾಡಿ. ಈ ನೆಲ-ಜಲ ಹಾಗೂ ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ನೈತಿಕ ಜವಾಬ್ದಾರಿಯಾಗಿದೆ. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸಾಲು ಸಾಲು ಪರಿಸರ ಮಾರಕ ಯೋಜನೆಗಳು ಅನುಷ್ಠಾನಗೊಂಡಿದ್ದು, ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ‘ಬೇಡ್ತಿ-ವರದಾ’ ಹಾಗೂ ‘ಅಘನಾಶಿನಿ-ವೇದಾವತಿ’ ನದಿ ಜೋಡಣೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳು ಜಿಲ್ಲೆಯ ಜನಜೀವನದ ಭದ್ರತೆ, ಪರಿಸರ ಸಮತೋಲನ ಹಾಗೂ ಭವಿಷ್ಯದ ಹಿತಕ್ಕೆ ಅತ್ಯಂತ ಗಂಭೀರ ಅಪಾಯ ತಂದೊಡ್ಡಲಿವೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಧಾರಣಾ ಸಾಮರ್ಥ್ಯದ ಕುರಿತು ಮೊದಲು ತಜ್ಞ ವಿಜ್ಞಾನಿಗಳಿಂದ ವೈಜ್ಞಾನಿಕ ಅಧ್ಯಯನ ನಡೆಯಬೇಕು. ಆ ವರದಿ ಬರುವವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಹೊಸ ಮಾರಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.
ಬಂದು ವಾಪಸ್ ಹೋದ ಪೊಲೀಸರು
ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಸಿಜೆಪಿಯ ಪ್ರತಿಭಟನೆ ನಡೆದಿತ್ತು. ಅದೇ ನಿರೀಕ್ಷೆಯಲ್ಲಿ ಕಾರ್ಯಕ್ರಮಕ್ಕೂ ಮೊದಲು ನೂರಾರು ಪೊಲೀಸರು ಪ್ರತಿಭಟನಾ ವೇದಿಕೆಯನ್ನು ಸುತ್ತುವರಿದಿದ್ದರು. ಆದರೆ ಪ್ರತಿಭಟನಾ ಸಭೆಗೆ ಉತ್ತರ ಕನ್ನಡದ ಜನರು ಆಗಮಿಸುತ್ತಿದ್ದಂತೆ, ಪರಿಸ್ಥಿತಿಯನ್ನು ಅರಿತುಕೊಂಡು ಪೊಲೀಸರು ಅಲ್ಲಿಂದ ಕಾಲ್ಕಿತ್ತರು. ಸಭೆ ಮುಗಿಯುವ ವೇಳೆಗೆ ನೆಪ ಮಾತ್ರಕ್ಕೆ ಬೆರಳೆಣಿಕೆಯ ಪೊಲೀಸರು ಅಲ್ಲಿದ್ದರು. ಸಭೆಯು ಪ್ರತಿಭಟನೆಯದ್ದಾಗಿದ್ದರೂ, ಸಣ್ಣ ರೀತಿಯ ಅಶಾಂತಿಯಾಗದಂತೆ ನೋಡಿಕೊಳ್ಳಲಾಗಿತ್ತು.
ಜನಪ್ರತಿನಿಧಿಗಳ ಒಗ್ಗಟ್ಟಿಗೆ ಆಗ್ರಹ
ಪ್ರತಿಭಟನಾ ಸಭೆಯ ಆಯೋಜಕರಾದ ಅನಂತ್ ಹೆಗಡೆ ಅಶೀಸರ ಮಾತನಾಡಿ, ಇದು ಉತ್ತರ ಕನ್ನಡ ಜಿಲ್ಲೆಯ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಜೀವ ನದಿಗಳ ಉಳಿವಿಗಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಿಲ್ಲಬೇಕು. ಎಲ್ಲ ರಾಜಕೀಯಗಳನ್ನು ಬದಿಗಿಟ್ಟು ಜನರ ಕೂಗಿನ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯು ಈಗಾಗಲೇ ಹಲವು ಯೋಜನೆಗಳಿಂದ ಕಷ್ಟಕ್ಕೆ ಸಿಲುಕಿದೆ. ಈಗ ಮತ್ತೆ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಮಾಡುವುದರಿಂದ ಜಿಲ್ಲೆಯ ಅರ್ಧಕ್ಕೂ ಅಧಿಕ ತಾಲೂಕುಗಳು ಅತೀವ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಮಲೆನಾಡಿನ ರೈತರು, ಕರಾವಳಿಯ ಮೀನುಗಾರರು ಹಾಗೂ ಎರಡೂ ಕಡೆಯ ಜೀವ ಸಂಕುಲಗಳಿಗೆ ಅತಿಯಾದ ಹಾನಿಯಾಗುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
—
ಸರ್ಕಾರದ ಪಾಲಿಗೆ ಉತ್ತರ ಕನ್ನಡವು ಫಲಭರಿತ ಹಣ್ಣಿನ ಮರದಂತಾಗಿದೆ. ಕಲ್ಲು ಹೊಡೆಯುವ ಬದಲಿಗೆ ಆಗಾಗ ಇಲ್ಲಿಯ ಕಾಡು ನಾಶ ಮಾಡಲು ಅಡಿಗಲ್ಲು ಹಾಕುವ ಕೆಲಸ ಮಾಡಲಾಗುತ್ತಿದೆ. ಇದು ಕೇವಲ ಪರಿಸರ ಹೋರಾಟಗಾರರ ವಿಚಾರವಲ್ಲ. ಈ ಜಿಲ್ಲೆಯ ಕಾಡನ್ನು ರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಕೆಲಸವಾಗಿದೆ.
- ಜಯಂತ್ ಕಾಯ್ಕಿಣಿ, ಹಿರಿಯ ಸಾಹಿತಿ
ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ-ಅಘನಾಶಿನಿ ನದಿಯ ಸುತ್ತಲು ಎಲ್ಲೂ ಇಲ್ಲದ ಜೀವ ವೈವಿಧ್ಯತೆಯಿದೆ. ಇದರ ಲಾಭವನ್ನು ಇಡೀ ದೇಶ ಪಡೆಯುತ್ತಿದೆ. ಹೀಗಾಗಿ ಈ ಕಾನಿನ ಜೀವ ವೈಶಿಷ್ಟ್ಯದ ಕೊಲೆ ಮಾಡುವ ಅಪರಾಧಕ್ಕೆ ಸರ್ಕಾರ ಕೈ ಹಾಕಬಾರದು. - ಯಲ್ಲಪ್ಪ ರೆಡ್ಡಿ, ಪರಿಸರ ಹೋರಾಟಗಾರ
ಮಲೆನಾಡು ಹಾಗೂ ಉತ್ತರ ಕನ್ನಡದ ನದಿ, ಕಣಿವೆ, ಕಾಡಿಗೆ ಸ್ವಾತಂತ್ರ್ಯ ಬೇಕಿದೆ. ವಿದೇಶಗಳಲ್ಲಿ ಕಟ್ಟಿರುವ ಅಣೆಕಟ್ಟನ್ನು ಕೆಡವಿ, ನದಿಗಳ ಮುಕ್ತ ಹರಿವಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ನಮ್ಮ ದೇಶವು ವಿರುದ್ಧ ದಿಕ್ಕಿನಲ್ಲಿ ಹೊರಟಿದೆ. ಯಾವುದೇ ಕೈಗಾರಿಕೆ, ಅಣೆಕಟ್ಟಿಲ್ಲದೇ ಹರಿಯುವ ಅಪರೂಪದ ನದಿ ಎನ್ನುವ ಪಟ್ಟವನ್ನು ಹೊಂದಿರುವ ಬೇಡ್ತಿ-ಅಘನಾಶಿನಿಯ ಪಾವಿತ್ರ್ಯವನ್ನು ಉಳಿಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು. ಈ ನದಿಗಳಿಗೂ ಮಾನವ ಹಕ್ಕುಗಳನ್ನು ನೀಡಬೇಕು.
-ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತ
ಸಭೆಯ 11 ನಿರ್ಣಯಗಳು
- ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ 22 ಪ್ರಮುಖ ನದೀ ಕಣಿವೆಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಸುಸ್ಥಿರ ಯೋಜನೆ ರೂಪಿಸಬೇಕು.
- ಬೇಡ್ತಿ ಮತ್ತು ಅಘನಾಶಿನಿ ನದೀ ಕಣಿವೆಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಿ ನೀರನ್ನು ಬೇರೆಡೆ ಸಾಗಿಸುವ ವಿನಾಶಕಾರಿ ಯೋಜನೆಗಳು ಕಣಿವೆಗಳ ರೈತರು, ಮೀನುಗಾರರು, ವನವಾಸಿಗಳು ಸೇರಿದಂತೆ ಲಕ್ಷಾಂತರ ಜನರ ಬದುಕನ್ನು ನಾಶಮಾಡಲಿದೆ ಎನ್ನುವುದನ್ನು ಸರ್ಕಾರ ಪರಿಗಣಿಸಬೇಕು.
*ಎತ್ತಿನಹೊಳೆ ನದಿ ತಿರುವು ಯೋಜನೆಯಂತೆ ಬೇಡ್ತಿ–ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ ಯೋಜನೆಗಳು ವ್ಯರ್ಥವಾಗಿದ್ದು, ನೀರಿಲ್ಲದ ನೀರಾವರಿ ಯೋಜನೆಗಳಾಗಲಿವೆ ಎಂದು ರಾಜ್ಯಮಟ್ಟದ ಧರಣಿ ಎಚ್ಚರಿಕೆ ನೀಡಿದೆ. - ಬೇಡ್ತಿ ನದಿಯಲ್ಲಿ ಹೆಚ್ಚುವರಿ ನೀರಿಲ್ಲ. ನದಿಗಳನ್ನು ತಿರುಗಿಸುವ ಹುಚ್ಚು ಸಾಹಸ ನಡೆಸಿದರೆ ಬೇಡ್ತಿ–ಅಘನಾಶಿನಿ ಜೀವ ನದಿಗಳು ಸಾಯುತ್ತವೆ.
- ಪಶ್ಚಿಮ ಘಟ್ಟ ಈಗಾಗಲೇ ಭೂಕುಸಿತದ ಭಾರಿ ಅಪಾಯಗಳಿಗೆ ಸಿಲುಕಿದೆ. ಬೇಡ್ತಿ–ಅಘನಾಶಿನಿ ಕಣಿವೆಗಳು ಭೂಕುಸಿತ ಸೂಕ್ಷ್ಮ ವಲಯದಲ್ಲಿವೆ. ಇಲ್ಲಿ ನದಿ ಜೋಡಣೆಯಂತಹ ಬೃಹತ್ ಯೋಜನೆಯಿಂದ ಇಂತಹ ಅಪಾಯಗಳು ಇನ್ನಷ್ಟು ಹೆಚ್ಚಲಿವೆ.
*ಕರಾವಳಿ ಪ್ರದೇಶವಾದ ಕುಮಟಾ–ಅಂಕೋಲಾ ಪ್ರದೇಶದಲ್ಲಿ ನದಿ ತಿರುವು ಯೋಜನೆ ಜಾರಿಯಾದರೆ ಉಪ್ಪುನೀರು ಒಳನುಗ್ಗಲಿದೆ. ಮೀನುಗಾರಿಕೆ ಮತ್ತು ಕೃಷಿ ಬದುಕು ನಾಶವಾಗಲಿದೆ. - ಲಕ್ಷಾಂತರ ಗಿಡಮರಗಳ ನಾಶದಿಂದ ಬೃಹತ್ ಯೋಜನೆಗಳು ಪಶ್ಚಿಮ ಘಟ್ಟದಲ್ಲಿ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಲು ಕಾರಣವಾಗುತ್ತವೆ. ಅಮೂಲ್ಯ ಸಸ್ಯ–ವನ್ಯ ಸಂಪತ್ತು ಕಣ್ಮರೆಯಾಗಲಿದೆ.
- ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿ ಕಣಿವೆಗಳನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ರಾಜ್ಯ ವನ್ಯಜೀವಿ ಇಲಾಖೆ 2012ರಲ್ಲಿ ಘೋಷಿಸಿದೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ರಾಜ್ಯ ಸರ್ಕಾರ ಕೈಗೊಂಡ ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಅಧ್ಯಯನವು ಬೃಹತ್ ಯೋಜನೆಗಳಿಗೆ ಉತ್ತರ ಕನ್ನಡದಲ್ಲಿ ಅವಕಾಶ ಸಲ್ಲದು.
*ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸುಸ್ಥಿರ ನೀರಾವರಿ ಯೋಜನೆಯನ್ನು ವಿನಾಶರಹಿತವಾಗಿ ಸರ್ಕಾರ ರೂಪಿಸಬೇಕು.
*ವಿಜ್ಞಾನಿಗಳು, ಸ್ಥಳೀಯ 120 ಗ್ರಾಮ ಪಂಚಾಯಿತಿಗಳು, 160 ಗ್ರಾಮೀಣ ಸಹಕಾರ ಸಂಘಗಳು, ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆ ಹಾಗೂ ಎಲ್ಲ ಧಾರ್ಮಿಕ ಮುಖಂಡರು ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. - ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ತಿರುವು ಯೋಜನೆಗಳನ್ನು ಕೈಬಿಡಬೇಕು ಮತ್ತು ಬೇಡ್ತಿ–ವರದಾ ಡಿಪಿಆರ್ (DPR) ಕೆಲಸವನ್ನು ಸ್ಥಗಿತಗೊಳಿಸಬೇಕು.
ಪ್ರತಿಭಟನೆಯಲ್ಲೂ ವಿಭಿನ್ನತೆ ಮೆರೆದ ಉಕ ಮಂದಿ!
ಉತ್ತರ ಕನ್ನಡದ ಜನರು ಶಿಸ್ತಿಗೆ ಹೆಸರುವಾಸಿ. ರಾಜಧಾನಿಯಲ್ಲಿ ನಡೆದ ಪ್ರತಿಭಟನೆಯಲ್ಲೂ ಅದೇ ಎದ್ದು ಕಾಣಿಸಿತು. ಒಂದು ಹಂತದಲ್ಲಿ ಫ್ರೀಡಂ ಪಾರ್ಕ್ನ ನಿಗಧಿತ ಪ್ರತಿಭಟನಾ ಸ್ಥಳವೇ ತುಂಬುವಷ್ಟು ಜನ ಸೇರಿದ್ದರೂ, ಯಾವುದೇ ಸಣ್ಣ ಅಹಿತಕರ ಘಟನೆಯೂ ನಡೆಯಲಿಲ್ಲ. ಪ್ರತಿಭಟನೆಯೆಂದಾಕ್ಷಣ ಗಲಾಟೆಯನ್ನು ನಿರೀಕ್ಷೆ ಮಾಡುವ ಪೊಲೀಸರು ದೊಡ್ಡ ಸಂಖ್ಯೆಯಲ್ಲೇ ಬಂದಿದ್ದರು. ಆದರೆ ಪ್ರತಿಭಟನೆಯ ಆರಂಭದಲ್ಲೇ ಜನರ ವರ್ತನೆಯನ್ನು ನೋಡಿ ಅರ್ಥ ಮಾಡಿಕೊಂಡ ಪೊಲೀಸರು, ಅಲ್ಲಿಂದ ಪಕ್ಕದ ಪ್ರತಿಭಟನೆ ಸ್ಥಳಕ್ಕೆ ಹೋಗಿಬಿಟ್ಟರು. ಕೊನೆಗೆ ನೆಪ ಮಾತ್ರಕ್ಕೆ ಒಂದಿಷ್ಟು ಪೊಲೀಸರ ಉಳಿದಿದ್ದರು.
ಇದಲ್ಲದೇ ಪ್ರತಿಭಟನಾ ಸ್ಥಳವು ಉತ್ತರ ಕನ್ನಡದ ಹಾಳೆಯ ಟೋಪಿ, ಕೋಕಂ ಜ್ಯೂಸ್ ಹಾಗೂ ಲಘು ಭೋಜನದ ಆತಿಥ್ಯದ ಮೂಲಕವೂ ಗಮನ ಸೆಳೆಯಿತು. ಇದರೊಂದಿಗೆ ʼಸಸ್ಯ ಶ್ಯಾಮಲಾಂ ವಂದೇ ಮಾತರಂʼ ಸೇರಿ ಹತ್ತು ಹಲವಾರು ಘೋಷಣೆ ಮೂಲಕ ಅಲ್ಲಿ ಸೆರದಿದ್ದ ಸಹಸ್ರಾರು ಜನರ ಕೂಗು ವಿಧಾನಸೌಧಕ್ಕೆ ಕೇಳುವಂತಿತ್ತು.
ಇದರೊಟ್ಟಿಗೆ ಕಲಾವಿದರಾದ ನೀರ್ನಳ್ಳಿ ರಾಮಕೃಷ್ಣ, ಲಕ್ಷ್ಮೀ ಹೆಗಡೆ ಅವರಂಥವರ ಮಾತುಗಳು ಜನರನ್ನು ಹುರಿದುಂಬಿಸುವ ಕೆಲಸ ಮಾಡಿದರೆ, ಪರಿಸರ ಕಾಲೇಜು ವಿದ್ಯಾರ್ಥಿನಿ ವನ್ಯಾ ಹೆಗಡೆಯಂಥ ಜೆನ್-ಝಿಗಳ ಮಾತು ಪರಿಸರ ಪ್ರಿಯರನ್ನು ಎಚ್ಚರಿಸುವಂತೆ ಮಾಡಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




