Kannada NewsKarnataka NewsLatestWorld

*ಸೇನಾ ತರಬೇತಿ ವಿಮಾನ ಪತನ*: *ಇಬ್ಬರು ಪೈಲಟ್‌ಗಳು  ಸಜೀವ ದಹನ!*

ಪ್ರಗತಿವಾಹಿನಿ ಸುದ್ದಿ: ಸೇನಾ ತರಬೇತಿ ವಿಮಾನವೊಂದು ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸಜೀವ ದಹನಗೊಂಡಿದ್ದಾರೆ. ತರಬೇತಿ ವಿಮಾನವು ಹಾರಾಟದ ವೇಳೆ ತಾಂತ್ರಿಕ ದೋಷಕ್ಕೆ ಸಿಲುಕಿ ನೆಲಕ್ಕೆ ಅಪ್ಪಳಿಸಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ಮೃತರನ್ನು ತರಬೇತುದಾರ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಮತ್ತು ಶಿಕ್ಷಣಾರ್ಥಿ ಪೈಲಟ್ ಕ್ಯಾಪ್ಟನ್ ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ. ಎಂದಿನಂತೆ ತರಬೇತಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಬಳಿಕ ವಿಮಾನ ಪತನಗೊಂಡಿದ್ದು, ಇಬ್ಬರೂ ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದಿದೆ.

ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಗೃಹ ಸಚಿವ ಮೊಹ್ಸಿನ್ ನಖ್ವಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಪೈಲಟ್‌ಗಳ ಕುಟುಂಬಗಳಿಗೆ ಸಾಂತ್ವನ ತಿಳಿಸಿರುವ ಅವರು, ಸೇನಾ ಸಿಬ್ಬಂದಿಯ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೇನಾ ಮತ್ತು ತರಬೇತಿ ವಿಮಾನಗಳು ಪತನಗೊಂಡ ಹಲವು ಘಟನೆಗಳು ವರದಿಯಾಗಿವೆ. ಜೂನ್ ತಿಂಗಳಲ್ಲಿ ಮುಜಫರಾಬಾದ್ ಬಳಿ ಪಾಕಿಸ್ತಾನ ಸೇನೆಯ ಎಂಐ-17 ಹೆಲಿಕಾಪ್ಟರ್ ಟೇಕ್‌ಆಫ್ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ಇದೇ ತಿಂಗಳು ಮರ್ದಾನ್‌ನಲ್ಲಿ ತರಬೇತಿ ನಿರತ ವಾಯುಪಡೆಯ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದಿಯಾಮೆರ್ ಜಿಲ್ಲೆಯ ಚಿಲಾಸ್ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡು ಐವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಕ್ವೆಟ್ಟಾ ಬಳಿಯ ಮತ್ತೊಂದು ವಿಮಾನ ದುರಂತವು ಪಾಕಿಸ್ತಾನದ ಸೇನಾ ವಾಯುಯಾನ ಸುರಕ್ಷತೆ ಕುರಿತು ಮತ್ತೆ ಗಮನ ಸೆಳೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button