*ಜಂತರ್ ಮಂತರ್ ಪ್ರತಿಭಟನಾ ಪಟ್ಟಿಯಿಂದ ಔಟ್*: *ಕೇಂದ್ರದ ನಿರ್ಧಾರಕ್ಕೆ ಅಭಿಜೀತ್ ದೀಪ್ಕೆ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಐತಿಹಾಸಿಕ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಪ್ರತಿಭಟನಾ ಸ್ಥಳವನ್ನು ರದ್ದುಗೊಳಿಸುವ ನಿರ್ಧಾರವಲ್ಲ, ಜನರ ಧ್ವನಿಯನ್ನೇ ಹತ್ತಿಕ್ಕುವ ಯತ್ನ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರದ ಕ್ರಮ ಪ್ರಜಾಪ್ರಭುತ್ವ ಮತ್ತು ಸಂವಿಧಾನಬದ್ಧ ಹಕ್ಕುಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅಭಿಜೀತ್ ದೀಪ್ಕೆ, ಸರ್ಕಾರಕ್ಕೆ ಜಂತರ್ ಮಂತರ್ ಸ್ಥಳದ ಬಗ್ಗೆ ಸಮಸ್ಯೆಯಿಲ್ಲ. ಆದರೆ, ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದೇ ಅವರಿಗೆ ಸಮಸ್ಯೆಯಾಗಿದೆ ಎಂದು ಟೀಕಿಸಿದ್ದಾರೆ.
ಸರ್ವಾಧಿಕಾರಿ ಮನೋಭಾವ ಹೊಂದಿರುವವರಿಗೆ ತಮ್ಮ ವಿರುದ್ಧ ಜನರು ಧ್ವನಿ ಎತ್ತುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯ ವ್ಯಕ್ತಪಡಿಸುವ ಪ್ರಮುಖ ಮಾರ್ಗವಾಗಿದ್ದು, ಅದಕ್ಕೆ ನಿರ್ಬಂಧ ವಿಧಿಸುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿರುವ ಸರ್ಕಾರ, ಮುಂದೊಂದು ದಿನ ದೇಶದ ಪ್ರಜಾಪ್ರಭುತ್ವವನ್ನೇ ರದ್ದುಪಡಿಸಿದರೂ ಆಶ್ಚರ್ಯಪಡಬೇಕಿಲ್ಲ ಎಂದು ಅಭಿಜೀತ್ ದೀಪ್ಕೆ ವ್ಯಂಗ್ಯವಾಡಿದ್ದಾರೆ.
ಪರಿಸ್ಥಿತಿ ಕೈಮೀರುವ ಮೊದಲು ಪ್ರತಿಯೊಬ್ಬ ನಾಗರಿಕರೂ ಒಗ್ಗೂಡಿ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. ಜಂತರ್ ಮಂತರ್ ಕುರಿತ ಸರ್ಕಾರದ ನಿರ್ಧಾರ ಈಗ ಪ್ರತಿಭಟನೆಯ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಚರ್ಚೆಯನ್ನು ಮುನ್ನೆಲೆಗೆ ತಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




