
ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026 ಟೂರ್ನಿ
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರ, ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ ವತಿಯಿಂದ ಅಕ್ಟೋಬರ್ 20 ರಿಂದ 25 ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಪ್ರತಿಷ್ಠಿತ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ (ಫಿಬಾ) ಹಾಗೂ ಫಿಬಾ ಏಷ್ಯಾ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಏಷ್ಯಾದ ಮಹಿಳಾ ವೃತ್ತಿಪರ ಬಾಸ್ಕೆಟ್‌ಬಾಲ್‌ನ ಅಗ್ರ ಕ್ಲಬ್ ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ.
ಅಗ್ರ 6 ಕ್ಲಬ್ ತಂಡಗಳು ಭಾಗಿ
ಅಗ್ರ ತಂಡಗಳಾದ ಸಿಚುವಾನ್ ಯುಯಾಂದ ಮೀಲೆ (ಚೀನಾ), ಡೆನ್ಸೊ ಐರಿಸ್ (ಜಪಾನ್), ಕೆ.ಬಿ.ಸ್ಟಾರ್ಸ್ (ಕೊರಿಯಾ), ಕ್ಯಾಥೆ ಲೈಫ್ ಟೈಗರ್ಸ್ (ಚೈನೀಸ್ ತೈಪೆ), ಅಕಾರಿ ಸ್ಪಾರ್ಕ್ಸ್ (ಫಿಲಿಫೈನ್ಸ್) ಹಾಗೂ ಭಾರತದ ಚಾಂಪಿಯನ್ ಕ್ಲಬ್ ತಂಡ ಭಾರತೀಯ ರೈಲ್ವೇಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ಸತತ ಮೂರನೇ ಆವೃತ್ತಿಯಲ್ಲಿ ಆಡುತ್ತಿರುವ ಏಕೈಕ ಕ್ಲಬ್ ಎನಿಸಿಕೊಂಡಿದೆ.
ಬಾಸ್ಕೆಟ್‌ಬಾಲ್ ಹಬ್ ಆಗಿ ಬೆಂಗಳೂರು
ಸಿಲಿಕಾನ್ ಸಿಟಿ, ಉದ್ಯಾನನಗರಿ, ವಿಜ್ಞಾನನಗರಿ ಸೇರಿದಂತೆ ವಿವಿಧ ಹೆಸರಿಡಿದು ಬೆಂಗಳೂರು ನಗರವನ್ನು ಕರೆಯಲಾಗುತ್ತದೆ. ಕ್ರೀಡೆ ವಿಷಯಕ್ಕೆ ಬಂದರೆ ಬೆಂಗಳೂರು ಬಾಸ್ಕೆಟ್‌ಬಾಲ್ ಹಬ್ ಆಗಿ ಬೆಳೆದಿದೆ. ಜೂನಿಯರ್ ಮಟ್ಟದಿಂದ ಹಿಡಿದು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ, ಫಿಬಾ ಏಷ್ಯಾ ಟೂರ್ನಿಗಳನ್ನು ಆಯೋಜಿಸುತ್ತಿರುವುದೇ ಇದಕ್ಕೆ ಸಾಕ್ಷಿ.
ಈಗಾಗಲೇ ಬೆಂಗಳೂರಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಹಲವು ಬಾರಿ ಫಿಬಾ ಏಷ್ಯಾ ಮಟ್ಟದ ಟೂರ್ನಿಗಳನ್ನು ಆಯೋಜಿಸಲಾಗಿದೆ. ಈ ಮೂಲಕ ಒಂದೇ ತಾಣದಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸಿರುವ ಹಿರಿಮೆಗೆ ಕಂಠೀರವ ಒಳಾಂಗಣ ಸ್ಟೇಡಿಯಂ ಪಾತ್ರವಾಗಿದೆ. 2004 ರಿಂದ ವಿವಿಧ ಫಿಬಾ ಟೂರ್ನಿಗಳನ್ನು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ ಆಯೋಜಿಸಿಕೊಂಡು ಬರುತ್ತಿದೆ.
ಟೂರ್ನಿಯ ಎಲ್ಲಾ ಪಂದ್ಯಗಳು ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲೆ ನಡೆಯಲಿದ್ದು, ಪ್ರತಿದಿನ ಎರಡು ಪಂದ್ಯಗಳು ನಡೆಯಲಿವೆ. ಸಂಜೆ 4 ಗಂಟೆಗೆ ಹಾಗೂ ರಾತ್ರಿ 7 ಗಂಟೆಗೆ ಪಂದ್ಯಗಳು ನಡೆಯಲಿವೆ.
ಬೆಂಗಳೂರಿಗೆ ಮತ್ತೊಂದು ಫಿಬಾ ಟೂರ್ನಿ ಆಯೋಜಿಸುವ ಅವಕಾಶ
ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026 ಆಯೋಜಿಸುತ್ತಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯ. ಇದು ಕ್ರೀಡೆಗೆ ನಾವು ನೀಡುತ್ತಿರುವ ಉತ್ತೇಜನ ಹಾಗೂ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಲು ಕ್ರೀಡಾಪಟುಗಳಿಗೆ ಸಿಗುತ್ತಿರುವ ಸದಾವಕಾಶವಾಗಿದೆ. ಬೆಂಗಳೂರು ಪ್ರಮುಖ ಕ್ರೀಡಾತಾಣವಾಗಿ ಗುರುತಿಸಿಕೊಂಡಿದ್ದು, ಇಂತಹ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸುವ ಮೂಲಕ ಜಾಗತಿಕ ಕ್ರೀಡಾ ಭೂಪಟದಲ್ಲಿ ಬೆಂಗಳೂರು ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ. ಅಲ್ಲದೆ, ಇದು ನಮ್ಮ ಯುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಬಾಸ್ಕೆಟ್‌ಬಾಲ್ ಆಟವನ್ನು ವೀಕ್ಷಿಸಲು, ಅಂತಾರಾಷ್ಟ್ರೀಯ ಆಟಗಾರರಿಂದ ಸ್ಫೂರ್ತಿ ಪಡೆಯಲು ಉತ್ತಮ ಅವಕಾಶ ಇದಾಗಿದೆ” ಎಂದು ಡಿಸಿಎಂ, ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
“ಏಷ್ಯಾದ ಅತ್ಯುತ್ತಮ ಮಹಿಳಾ ಕ್ಲಬ್ ತಂಡಗಳನ್ನು ಒಂದೇ ವೇದಿಕೆಗೆ ತರಲು ಹಾಗೂ ಏಷ್ಯಾದ ಮಹಿಳಾ ಬಾಸ್ಕೆಟ್‌ಬಾಲ್ ಸಾಮರ್ಥ್ಯವನ್ನು ಪ್ರದರ್ಶಿಸಲು FIBA ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ’ ಒಂದು ಪ್ರಮುಖ ವೇದಿಕೆಯಾಗಿದೆ. ಬೆಂಗಳೂರಿನಲ್ಲಿ ಆರು ಅತ್ಯುತ್ತಮ ತಂಡಗಳು ಆಡಲಿದ್ದು, ಬೆಂಗಳೂರು ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲು ನೀಡಲಿವೆ. ಬೆಂಗಳೂರು ಬಾಸ್ಕೆಟ್‌ಬಾಲ್ ಹಬ್ ಎನ್ನುವುದರಲ್ಲಿ ಸಂಶಯವಿಲ್ಲ. 2004ರಿಂದಲೂ ಫಿಬಾ ಏಷ್ಯಾಮಟ್ಟದ ಟೂರ್ನಿಗಳನ್ನು ಬೆಂಗಳೂರಿನಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.
ಏಷ್ಯಾದ ಆರು ದೇಶಗಳ ಅಗ್ರ ಕ್ಲಬ್‌ಗಳು ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026 ಟೂರ್ನಿಯಲ್ಲಿ ಆಡುತ್ತಿವೆ. ಕರ್ನಾಟಕ ಸರ್ಕಾರ ಸಹಕಾರದ ಫಲವಾಗಿ ಇಂದು ಬೆಂಗಳೂರಿನಲ್ಲಿ ಫಿಬಾ ಏಷ್ಯಾದಂಥ ಪ್ರತಿಷ್ಠಿತ ಕ್ಲಬ್‌ಗಳ ಲೀಗ್ ಆಯೋಜಿಸಲಾಗುತ್ತಿದೆ. ಈ ಟೂರ್ನಿಯೂ ಕರ್ನಾಟಕ ಕ್ರೀಡಾ ಇತಿಹಾಸದಲ್ಲಿ ಕಂಡ ಮಹತ್ವದ ಟೂರ್ನಿಯಾಗಲಿದೆ. ಬೆಂಗಳೂರಿನಲ್ಲಿ ಈ ಟೂರ್ನಿಯನ್ನು ಆಯೋಜಿಸುವ ಮೂಲಕ ಏಷ್ಯನ್ ಬಾಸ್ಕೆಟ್‌ಬಾಲ್ ಕ್ಯಾಲೆಂಡರ್‌ನಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಹಾಗೂ ಮುಂದಿನ ಪೀಳಿಗೆಯ ಆಟಗಾರರಿಗೆ ಸ್ಪೂರ್ತಿಯಾಗಲಿದೆ ಎಂದರು.
ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾದ ಬಿ.ದಯಾನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಂ.ಎನ್.ಅನುಚೇತ್ ಅವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




