Belagavi NewsBelgaum NewsKannada NewsPoliticsTravel

*ರೈತರಿಂದ ಹೆದ್ದಾರಿ ಬಂದ್ ಸಾಧ್ಯತೆ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಪ್ರಕಟಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಅಕ್ಟೋಬರ್ 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಬೆಳಗಾವಿ ಜಿಲ್ಲಾ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. 

ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ವಿವಿಧ ದಿಕ್ಕುಗಳಿಂದ ಬರುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಧಾರವಾಡ, ಕೊಲ್ಲಾಪುರ ಸೇರಿದಂತೆ ವಿವಿಧ ಭಾಗಗಳಿಂದ ಬೆಳಗಾವಿಗೆ ಆಗಮಿಸುವ ಹಾಗೂ ಗೋಕಾಕ, ಬಾಗಲಕೋಟೆ ಮತ್ತು ವಿಜಯಪುರ ಕಡೆಗೆ ತೆರಳುವ ವಾಹನ ಸವಾರರು ಪೊಲೀಸ್ ಇಲಾಖೆ ಸೂಚಿಸಿರುವ ಮಾರ್ಗಗಳಲ್ಲೇ ಸಂಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿದ್ದಾರೆ.

ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗಗಳು: 

ಕಾಗಲ್‌ನಿಂದ ನಿಪ್ಪಾಣಿ ಮತ್ತು ಚಿಕ್ಕೋಡಿ ಮಾರ್ಗವಾಗಿ ಗೋಕಾಕ ತಲುಪಬಹುದು. ಧಾರವಾಡದಿಂದ ಗೋಕಾಕ ಕಡೆಗೆ ತೆರಳುವ ಭಾರೀ ವಾಹನಗಳು ಬೆಳವಡಿ–ಮೆಕ್ಕಲಮರಡಿ ಕ್ರಾಸ್‌ ಮಾರ್ಗ ಅಥವಾ ಬೆಳವಡಿ ಕ್ರಾಸ್‌–ಮುನವಳ್ಳಿ–ಸವದತ್ತಿ–ಯರಗಟ್ಟಿ ಮಾರ್ಗ ಬಳಸಬಹುದು.

ಲಘು ವಾಹನಗಳ ಸಂಚಾರಕ್ಕೆ ಸೂಚಿಸಿದ ಮಾರ್ಗ: 

ಗೊಟೂರಿನಿಂದ ಕಮತನೂರು ಗೇಟ್‌, ಹುಕ್ಕೇರಿ, ಘಟಪ್ರಭಾ, ಗೋಕಾಕ ಮತ್ತು ಯರಗಟ್ಟಿ ಮಾರ್ಗವಾಗಿ ಸವದತ್ತಿ, ಬಾಗಲಕೋಟೆ ಹಾಗೂ ಧಾರವಾಡ ಕಡೆಗೆ ತೆರಳಬಹುದು. ಯರಗಟ್ಟಿಯಿಂದ ಬಾಗಲಕೋಟೆ ಮತ್ತು ವಿಜಯಪುರಕ್ಕೆ ತೆರಳುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಮಾಲದಿನ್ನಿ ಕ್ರಾಸ್‌ನಿಂದ ನೇಸರಗಿ ಮಾರ್ಗವಾಗಿ ಬೆಳಗಾವಿ ನಗರ ತಲುಪಲು ಅವಕಾಶವಿದೆ.

ಧಾರವಾಡದಿಂದ ಬೆಳಗಾವಿಗೆ ಬರುವವರಿಗೆ

ಅಳ್ನಾವರ–ರಾಮನಗರ–ಖಾನಾಪುರ ಮಾರ್ಗ ಅಥವಾ ಲಿಂಗನಮಠ ಕ್ರಾಸ್‌–ನಂದಗಡ–ಖಾನಾಪುರ ಮಾರ್ಗವಾಗಿ ನಗರ ಪ್ರವೇಶಿಸಬಹುದು. ಕಿತ್ತೂರಿನಿಂದ ಬರುವ ವಾಹನಗಳು ನಂದಗಡ–ಖಾನಾಪುರ ಮಾರ್ಗವನ್ನು ಅಥವಾ ಎಂ.ಕೆ. ಹುಬ್ಬಳ್ಳಿ–ಪಾರಿಶ್ವಾಡ–ಖಾನಾಪುರ ಮಾರ್ಗವನ್ನು ಅನುಸರಿಸಬಹುದು.

ಕೊಲ್ಲಾಪುರದಿಂದ ಬೆಳಗಾವಿಗೆ ಬರುವ ವಾಹನಗಳಿಗೆ: ಕಾಗಲ್‌, ಆದಮಾಪುರ, ಗರಗೋಟಿ, ಗಡಿಂಗ್ಲಜ, ಆಜರಾ, ಚಂದಗಡ ಮತ್ತು ಶಿನೊಳ್ಳಿ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಪ್ರಯಾಣಕ್ಕೂ ಮುನ್ನ ಪರ್ಯಾಯ ಮಾರ್ಗಗಳ ಬಗ್ಗೆ ಗಮನಹರಿಸಬೇಕು. ನಿಗದಿತ ವೇಗದ ಮಿತಿಯನ್ನು ಪಾಲಿಸುವುದರ ಜೊತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಎಸ್ಪಿ ಕೆ. ರಾಮರಾಜನ್ ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button