*ಬೆಳಗ್ಗೆ ಹಳೆ ಪಾತ್ರೆ ಹಳೆ ಕಬ್ಬಿಣ, ರಾತ್ರಿ ಮನೆಗಳ್ಳತನ: ಟೋಪಿ ಗ್ಯಾಂಗ್ನ ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪಾತ್ರೆ ಮಾರುವವರ ಸೋಗಿನಲ್ಲಿ ಬಡಾವಣೆಗಳಲ್ಲಿ ಸಂಚರಿಸಿ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಟೋಪಿ ಗ್ಯಾಂಗ್ನ ಮೂವರು ಆರೋಪಿಗಳನ್ನು ಮುಳಬಾಗಿಲು ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಮಾರು 52 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡು ಮೂಲದ ಮುನಿರಾಜು, ಸಂತೋಷ್ ಕುಮಾರ್ ಮತ್ತು ಪೆರುಮಾಳ್ ಬಂಧಿತ ಆರೋಪಿಗಳು. ಇವರಿಂದ 332 ಗ್ರಾಂ ಚಿನ್ನಾಭರಣ, ಸುಮಾರು 2 ಕೆ.ಜಿ. ಬೆಳ್ಳಿ ವಸ್ತುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಪಾತ್ರೆ ಮಾರುವ ನೆಪದಲ್ಲಿ ಮನೆಮನೆಗೆ ತೆರಳಿ, ಜನರಿಲ್ಲದ ಹಾಗೂ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ಸೂಕ್ತ ಸಮಯ ಸಾಧಿಸಿ ಹಗಲು ಅಥವಾ ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳ್ಳತನ ಎಸಗುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮುಳಬಾಗಿಲು ತಾಲೂಕಿನ ಎಮ್ಮೆನತ್ತ ಗ್ರಾಮದ ಜಯರಾಮಾಚಾರಿ (78) ಅವರು ಮೇ 4ರಂದು ಮನೆಗೆ ಬೀಗ ಹಾಕಿ ಮಗಳ ಮನೆಗೆ ತೆರಳಿದ್ದರು. ಮೇ 17ರಂದು ನೆರೆಮನೆಯವರು ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದರು. ಮೇ 18ರಂದು ಮನೆಗೆ ಬಂದು ಪರಿಶೀಲಿಸಿದಾಗ ಬಾಗಿಲು ಮುರಿದು 30 ಗ್ರಾಂ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿಶೇಷ ತಂಡ ರಚಿಸಿ, ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳ ವಿಚಾರಣೆಯಿಂದ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯ ಒಂದು, ಮುಳಬಾಗಿಲು ನಗರ ಪೊಲೀಸ್ ಠಾಣೆಯ ಏಳು ಹಾಗೂ ಮಾಲೂರು ಪೊಲೀಸ್ ಠಾಣೆಯ ಎರಡು ಪ್ರಕರಣಗಳು ಸೇರಿದಂತೆ ಒಟ್ಟು 10 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ವಿಚಾರಣೆ ವೇಳೆ ಹತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುನಿರಾಜು ಮತ್ತು ಕೃಷ್ಣ ಎಂಬವರ ವಿರುದ್ಧ ತಮಿಳುನಾಡಿನ ಹೊಸೂರಿನಲ್ಲಿ ಏಳು ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಸಂತೋಷ್ ಕುಮಾರ್ ಈ ಹಿಂದೆ ಅಕ್ಕಿ ಕಳ್ಳತನ ಮತ್ತು ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಪೆರುಮಾಳ್ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕಿ ಮನೀಷಾ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



