Belagavi NewsBelgaum NewsKannada NewsKarnataka News

*ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವವರೆಗೂ ಕಾರ್ಖಾನೆ ಆರಂಭಿಸಲ್ಲ*; ರೈತರ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ದರ ನಿಗದಿಪಡಿಸುವವರೆಗೂ ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಅಕ್ಟೋಬರ್ 17ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲು ರೈತ ಮುಖಂಡರು ನಿರ್ಧರಿಸಿದ್ದಾರೆ.

ಗುರ್ಲಾಪುರ ರೈತ ಹೋರಾಟ ವೇದಿಕೆಯಲ್ಲಿ ಮಾತನಾಡಿದ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಕಬ್ಬಿನ ನ್ಯಾಯಯುತ ಬೆಲೆ ಘೋಷಣೆಯಾಗುವವರೆಗೂ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಕಳೆದ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3,300 ದರ ನೀಡಲಾಗಿತ್ತು. ಆದರೆ ಬಿತ್ತನೆ, ಗೊಬ್ಬರ, ಕಾರ್ಮಿಕರ ಕೂಲಿ ಹಾಗೂ ಇತರ ಕೃಷಿ ವೆಚ್ಚಗಳು ಹೆಚ್ಚಾಗಿರುವುದರಿಂದ ರೈತರಿಗೆ ಈಗಿನ ದರ ಸಾಕಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ದರ ನಿಗದಿಪಡಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ತಮಿಳುನಾಡಿನ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಬೇಕು. ಇದರ ಜೊತೆಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹500 ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಲ್ಲಿ ಹೆಚ್ಚಳವಾಗಿದ್ದರೂ, ವಾಸ್ತವಿಕ ಕೃಷಿ ವೆಚ್ಚಕ್ಕೆ ಅನುಗುಣವಾಗಿ ರೈತರಿಗೆ ಆದಾಯ ದೊರೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಮಾತುಕತೆ ನಡೆಸಿ ನ್ಯಾಯಯುತ ದರವನ್ನು ಅಂತಿಮಗೊಳಿಸುವವರೆಗೂ ಕಬ್ಬು ನುರಿಸುವ ಹಂಗಾಮು ಆರಂಭಿಸಬಾರದು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತ ಮುಖಂಡ ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಆಯೋಜಿಸಲು ಸಿದ್ಧತೆ ನಡೆಸಲಾಗಿದ್ದು, ಗುರ್ಲಾಪುರವನ್ನು ಕೇಂದ್ರವಾಗಿಟ್ಟುಕೊಂಡು ಹೋರಾಟವನ್ನು ಸಂಘಟಿಸಲು ರೈತರು ಮುಂದಾಗಿದ್ದಾರೆ. ಅಕ್ಟೋಬರ್ 17ರಿಂದ ಆರಂಭವಾಗಲಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಮತ್ತಷ್ಟು ತೀವ್ರತೆ ನೀಡುವ ನಿರೀಕ್ಷೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button