Kannada NewsKarnataka NewsLatestPolitics

*ಬುದ್ಧ, ಅಂಬೇಡ್ಕರ್‌ ಹೆಸರಲ್ಲಿ ಲೂಟಿ ಮಾಡಿದ ಬಲಿತ ದಲಿತ ನೀನು*:*ಪ್ರಿಯಾಂಕ್‌ ಖರ್ಗೆ ವಿರುದ್ಧ HDK ಗುಡುಗು*

ಪ್ರಗತಿವಾಹಿನಿ ಸುದ್ದಿ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ವಾಗ್ಯುದ್ಧ ಮತ್ತಷ್ಟು ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ ಪ್ರಕರಣ, ಪೊಲೀಸ್ ತನಿಖೆ ಮತ್ತು ರಾಜಕೀಯ ಮೀಸಲಾತಿ ವಿಚಾರಗಳನ್ನು ಪ್ರಸ್ತಾಪಿಸಿ ಸರಣಿ ಆರೋಪಗಳನ್ನು ಮಾಡಿದ್ದಾರೆ.

ಗೃಹ ಸಚಿವರ ಕಾರ್ಯವೈಖರಿಯನ್ನೂ ಪ್ರಶ್ನಿಸಿರುವ ಕುಮಾರಸ್ವಾಮಿ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿರುವುದಾಗಿ ಹೇಳಲಾದ ಸ್ಟಿಂಗ್ ಸಂಚಿನ ವಿಚಾರವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಗೃಹ ಸಚಿವ ಸ್ಥಾನಕ್ಕೆ ಸೂಕ್ತರಲ್ಲ ಎಂದು ಟೀಕಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಮೀಸಲಾತಿ ವಿಚಾರವನ್ನೂ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ‘ಬಲಿತ ದಲಿತ’ ಎಂಬ ಪದ ಬಳಸಿ ಟೀಕಿಸಿರುವ ಕುಮಾರಸ್ವಾಮಿ, ಮೀಸಲು ಕ್ಷೇತ್ರಗಳಿಂದ ಗೆದ್ದು ಅಧಿಕಾರದಲ್ಲಿರುವ ನಾಯಕರು ದುರ್ಬಲ ದಲಿತರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಧೈರ್ಯವಿದ್ದರೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬರಲಿ ಎಂಬ ಸವಾಲನ್ನೂ ಹಾಕಿದ್ದಾರೆ.

ತಮ್ಮ ಬೆಂಬಲಿಗರ ವಿರುದ್ಧ ನಡೆಯುತ್ತಿರುವ ಪೊಲೀಸ್ ಕ್ರಮದ ಬಗ್ಗೆಯೂ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ರಾಜಕೀಯ ಅಖಾಡದಿಂದ ಓಡುವುದು ನನ್ನ ಜಾಯಮಾನವಲ್ಲ” ಎಂದು ಹೇಳಿದ್ದಾರೆ. ಕೆಪಿಎಸ್‌ಸಿ ಅಕ್ರಮ ಮತ್ತು ಸ್ಟಿಂಗ್ ಆಪರೇಷನ್ ವಿಚಾರಗಳನ್ನು ಪ್ರಸ್ತಾಪಿಸಿದಾಗ ಎದುರಾಳಿಗಳು ಹೇಗೆ ಪ್ರತಿಕ್ರಿಯಿಸಿದರು ಎಂಬುದು ತನಗೆ ತಿಳಿದಿದೆ ಎಂದೂ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ಟಿಂಗ್ ಆಪರೇಷನ್‌ನ ಹಿಂದಿರುವ ಪ್ರಮುಖ ವ್ಯಕ್ತಿ ಎಂದು ತಾನು ಆರೋಪಿಸಿರುವ ವ್ಯಕ್ತಿಯನ್ನು ಬಂಧಿಸಲು ಸರ್ಕಾರ ವಿಫಲವಾಗಿದೆ ಎಂದು ಕುಮಾರಸ್ವಾಮಿ ದೂರಿದ್ದಾರೆ. ಪೊಲೀಸ್ ಅಧಿಕಾರಿಗಳನ್ನೇ ಸ್ಟಿಂಗ್ ಮಾಡಿ ಹಣ ವಸೂಲಿ ಮಾಡಿರುವ ಆರೋಪವೂ ಇದೆ ಎಂದು ಉಲ್ಲೇಖಿಸಿದ್ದಾರೆ. ಈ ವ್ಯಕ್ತಿಗೆ ಪೊಲೀಸ್ ಇಲಾಖೆಯಲ್ಲಿ ಪ್ರಭಾವವಿದೆ ಎಂಬ ಆರೋಪವನ್ನೂ ಮುಂದಿಟ್ಟಿದ್ದಾರೆ.

ಇಷ್ಟೇ ಅಲ್ಲದೆ, ಸ್ಟಿಂಗ್ ಆಪರೇಷನ್ ನಡೆಸಿದ ವ್ಯಕ್ತಿಯ ಜಾಲದಲ್ಲಿ ಪ್ರಿಯಾಂಕ್ ಖರ್ಗೆ ಕೂಡ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಇಬ್ಬರು ನಾಯಕರ ನಡುವಿನ ಈ ವಾಕ್ಸಮರ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button