Kannada NewsKarnataka NewsLatestNational

*ಕೋಲ್ಕತ್ತಾ ಕಾಲ್ತುಳಿತದ ಕರಾಳ ಕ್ಷಣ*: *ಮಗುವನ್ನು ಎದೆಗವಚವಾಗಿ ಕಾಪಾಡಿದ ತಾಯಿ, ಜೀವ ಉಳಿಸಲು 1.5 ಕಿ.ಮೀ ಓಡಿದ ಟ್ಯಾಕ್ಸಿ ಚಾಲಕ!*

ಪ್ರಗತಿವಾಹಿನಿ ಸುದ್ದಿ: ದುರ್ಗಾಪೂಜೆಯ ಸಂಭ್ರಮ ಕ್ಷಣಾರ್ಧದಲ್ಲಿ ದುರಂತವಾಗಿ ಬದಲಾದಾಗ, ತಾಯಿ ತನ್ನ ಮೂರು ವರ್ಷದ ಮಗನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಕಾಲ್ತುಳಿತದಲ್ಲಿ ತಾಯಿ ಮೃತಪಟ್ಟರೂ ಮಗು ಬದುಕುಳಿದಿದ್ದು, ಬಳಿಕ ಮಗುವನ್ನು ಕಂಡ ಟ್ಯಾಕ್ಸಿ ಚಾಲಕನೊಬ್ಬ ತಕ್ಷಣ ನೆರವಿಗೆ ಧಾವಿಸಿದ್ದಾನೆ. ಸುಮಾರು ಒಂದೂವರೆ ಕಿಲೋಮೀಟರ್ ಮಗುವನ್ನು ಎತ್ತಿಕೊಂಡೇ ಓಡಿ ಆಸ್ಪತ್ರೆಗೆ ತಲುಪಿಸಿದ ಚಾಲಕನ ಮಾನವೀಯ ನಡೆ ಗಮನ ಸೆಳೆಯುತ್ತಿದೆ.

ಉತ್ತರ ಕೋಲ್ಕತ್ತಾದ ಚೋರೆಬಾಗನ್ ದುರ್ಗಾಪೂಜಾ ಮಂಟಪದಲ್ಲಿ ಅಕ್ಟೋಬರ್ 17ರಂದು ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಧಾರಾಕಾರ ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಕಿರಿದಾದ ಪ್ರವೇಶದ್ವಾರದ ಮೂಲಕ ಒಳನುಗ್ಗಿದಾಗ ನೂಕುನುಗ್ಗಲು ಉಂಟಾಗಿತ್ತು. ಈ ಭೀಕರ ಪರಿಸ್ಥಿತಿಯಲ್ಲಿ 28 ವರ್ಷದ ಸುಚಿತ್ರಾ ದಾಸ್ ಎಂಬುವವರು ತನ್ನ ಮೂರು ವರ್ಷದ ಮಗ ಆಯುಷ್ ಜೊತೆ ಜನಸಂದಣಿಯಲ್ಲಿ ಸಿಲುಕಿಕೊಂಡಿದ್ದರು.

ಜನರ ನೂಕಾಟದಲ್ಲಿ ಸುಚಿತ್ರಾ ನೆಲಕ್ಕೆ ಬಿದ್ದರೂ ಮಗುವನ್ನು ಎದೆಗೆ ಬಿಗಿಯಾಗಿ ಅಪ್ಪಿಕೊಂಡು ರಕ್ಷಿಸಲು ಪ್ರಯತ್ನಿಸಿದ್ದರು. ಇತರರು ಮಗುವಿನ ಮೇಲೆ ಕಾಲಿಡದಂತೆ ತನ್ನ ದೇಹವನ್ನೇ ರಕ್ಷಾಕವಚವನ್ನಾಗಿ ಮಾಡಿಕೊಂಡಿದ್ದಳು. ಜನಸಂದಣಿ ಕಡಿಮೆಯಾದಾಗ ಸುಚಿತ್ರಾ ಉಸಿರುಗಟ್ಟಿ ಮೃತಪಟ್ಟಿದ್ದರು. ಆದರೆ, ತಾಯಿಯ ಅಪ್ಪುಗೆಯೊಳಗಿದ್ದ ಪುಟ್ಟ ಆಯುಷ್ ಬದುಕುಳಿದಿದ್ದ.

ಮೃತ ತಾಯಿಯ ಪಕ್ಕದಲ್ಲಿ ಅಳುತ್ತಿದ್ದ ಮಗುವನ್ನು ಕಂಡ 42 ವರ್ಷದ ಟ್ಯಾಕ್ಸಿ ಚಾಲಕ ಬಿಪ್ಲಬ್ ಮುಖರ್ಜಿ ತಕ್ಷಣ ನೆರವಿಗೆ ಧಾವಿಸಿದ್ದಾನೆ. ಆಂಬ್ಯುಲೆನ್ಸ್‌ಗಾಗಿ ಕಾಯದೆ ಮಗುವನ್ನು ಎತ್ತಿಕೊಂಡು, ರಸ್ತೆಯಲ್ಲಿ ಬಿದ್ದಿದ್ದ ಅವಶೇಷಗಳು ಮತ್ತು ವಾಹನ ದಟ್ಟಣೆಯ ನಡುವೆಯೇ ಮುಕ್ತಾರಾಮ್ ಬಾಬು ರಸ್ತೆಯ ಕಿರಿದಾದ ಓಣಿಗಳ ಮೂಲಕ ಓಡಿದ್ದಾನೆ. ಸುಮಾರು ಒಂದೂವರೆ ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ಮಗುವನ್ನು ತನ್ನ ಟ್ಯಾಕ್ಸಿಯಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ವೈದ್ಯರು ತಕ್ಷಣ ಆಮ್ಲಜನಕ ನೀಡಿ ತುರ್ತು ಚಿಕಿತ್ಸೆ ಆರಂಭಿಸಿದರು. ಬಳಿಕ ಮಗುವನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮಗುವಿನ ತಂದೆ ಆಸ್ಪತ್ರೆಗೆ ತಲುಪುವವರೆಗೂ ಬಿಪ್ಲಬ್ ಆಸ್ಪತ್ರೆಯ ಕಾರಿಡಾರ್‌ನಲ್ಲೇ ಕಣ್ಣೀರು ಹಾಕುತ ಕುಳಿತುಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಮಾತನಾಡಿರುವ ಬಿಪ್ಲಬ್, ಮಗುವು ರಕ್ತಸಿಕ್ತ ಕೈಗಳಿಂದ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ಮನಸ್ಸನ್ನು ತಲ್ಲಣಗೊಳಿಸಿತು. ತನಗೂ ಇಬ್ಬರು ಮಕ್ಕಳಿದ್ದು, ಆ ಕ್ಷಣದಲ್ಲಿ ಮಗುವಿನ ಜೀವ ಉಳಿಸುವುದೊಂದೇ ಮನಸ್ಸಿನಲ್ಲಿತ್ತು ಎಂದು ಭಾವುಕನಾಗಿದ್ದಾರೆ. ಕೊನೆಯ ಕ್ಷಣದವರೆಗೂ ಮಗುವನ್ನು ಬಿಟ್ಟುಕೊಡದ ತಾಯಿಯ ತ್ಯಾಗ ವ್ಯರ್ಥವಾಗಬಾರದು ಎಂಬ ಭಾವನೆಯಿಂದ ತಕ್ಷಣ ನೆರವಿಗೆ ಧಾವಿಸಿದ್ದಾಗಿ ಹೇಳಿದ್ದಾರೆ.

ತಾಯಿಯನ್ನು ಕಳೆದುಕೊಂಡ ಪುಟ್ಟ ಆಯುಷ್ ತಂದೆಯ ಮಡಿಲು ಸೇರಿದ್ದಾನೆ. ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಟ್ಯಾಕ್ಸಿ ಚಾಲಕನ ಮಾನವೀಯತೆ ಮೆಚ್ಚುಗೆಗೆ ಕಾರಣವಾಗಿದೆ. ದುರ್ಗಾಪೂಜೆಯ ಸಂಭ್ರಮದ ನಡುವೆ ಸಂಭವಿಸಿದ ಕಾಲ್ತುಳಿತದ ದುರಂತ ಹಲವು ಕುಟುಂಬಗಳನ್ನು ದುಃಖದಲ್ಲಿ ಮುಳುಗಿಸಿದೆ. ಈ ನಡುವೆ ಮಗುವನ್ನು ರಕ್ಷಿಸುವ ಪ್ರಯತ್ನದಲ್ಲಿ ತಾಯಿ ತೋರಿದ ತ್ಯಾಗ ಮತ್ತು ನೆರವಿಗೆ ಧಾವಿಸಿದ ಚಾಲಕನ ಕಾರ್ಯದ ಶ್ಲಾಘನೀಯವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button