Kannada NewsKarnataka NewsLatestPolitics

*ಇಸ್ರೋ ರಾಕೆಟ್‌ಗಳಿಗಿಂತ ರಾಹುಲ್ ರೀ-ಲಾಂಚ್ ಹೆಚ್ಚಾಗಿದೆ*: *ಮೋದಿ ವ್ಯಂಗ್ಯ!*

ಪ್ರಗತಿವಾಹಿನಿ ಸುದ್ದಿ: ಜಗತ್ತು ಹೊಸ ವ್ಯವಸ್ಥೆಯತ್ತ ನೋಡುತ್ತಿದ್ದರೆ, ಭಾರತದಲ್ಲಿ ಕೆಲವರು ಅರಾಜಕತೆ ಸೃಷ್ಟಿಸುವ ಕನಸು ಕಾಣುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ನಡೆದ ವಿಶ್ವ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಒಂದು ಕುಟುಂಬದ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ದೇಶದ ಪ್ರಗತಿ ಮತ್ತು ಘನತೆಯನ್ನು ಪಣಕ್ಕಿಡುತ್ತಿದೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದೆ ವ್ಯಂಗ್ಯವಾಡಿದ ಪ್ರಧಾನಿ, ಕಾಂಗ್ರೆಸ್ ತನ್ನ ‘ವಿಫಲ ಉತ್ಪನ್ನ’ವನ್ನು ಮರುಮರು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಶ್ರೀಹರಿಕೋಟಾದಿಂದ ವರ್ಷವಿಡೀ ಉಡಾವಣೆಯಾಗುವ ರಾಕೆಟ್‌ಗಳಿಗಿಂತಲೂ ಹೆಚ್ಚು ಬಾರಿ ಕಾಂಗ್ರೆಸ್ ತನ್ನ ನಾಯಕನನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ಪಕ್ಷ ತನ್ನನ್ನು ತಾನೇ ಹಾಳುಮಾಡಿಕೊಂಡರೆ ಅದಕ್ಕೆ ತಮ್ಮ ತಕರಾರಿಲ್ಲ, ಆದರೆ ಒಂದು ಕುಟುಂಬದ ವೈಫಲ್ಯ ಮುಚ್ಚಿಹಾಕಲು ದೇಶದ ಸಾಧನೆಗಳನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶಗಳಿಗೆ ತೆರಳಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳನ್ನು ಕೀಳಾಗಿ ಬಿಂಬಿಸುವ ಮೂಲಕ ಕಾಂಗ್ರೆಸ್ ದೇಶದ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ವಿದೇಶಿ ಶಕ್ತಿಗಳು ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವಂತೆ ಮನವಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಅಧಿಕಾರ ಕಳೆದುಕೊಂಡ ಬಳಿಕ ಕಾಂಗ್ರೆಸ್‌ಗೆ ಎಲ್ಲವೂ ಕಹಿಯಾಗಿದ್ದು, ತನ್ನ ವೈಫಲ್ಯದಿಂದ ಇಡೀ ದೇಶದ ಪ್ರಗತಿಗೆ ಅಡ್ಡಿಯಾಗುವ ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ನ ನೆಹರೂ-ಗಾಂಧಿ ಕುಟುಂಬವೇ ಪಕ್ಷಕ್ಕೆ ಹೊರೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಪಕ್ಷದ ಹಲವು ಹಿರಿಯ ನಾಯಕರು ಈ ವಿಚಾರವನ್ನು ಖಾಸಗಿ ಮಾತುಕತೆಗಳಲ್ಲಿ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಸರ್ಕಾರದ ನೀತಿಗಳನ್ನು ಪ್ರಜಾಸತ್ತಾತ್ಮಕವಾಗಿ ಪ್ರಶ್ನಿಸಲು ಬಯಸುವ ಪ್ರತಿಭಾವಂತ ಯುವ ಸಂಸದರು ಕಾಂಗ್ರೆಸ್‌ನಲ್ಲಿದ್ದಾರೆ. ಆದರೆ, ಒಬ್ಬ ವ್ಯಕ್ತಿಯನ್ನು ಮಾತ್ರ ಮುಂಚೂಣಿಯಲ್ಲಿಡಲು ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಮೂಲಕ ಇತರ ನಾಯಕರ ಅವಕಾಶವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ‘ಪರಾವಲಂಬಿ’ ಪಕ್ಷ ಎಂದು ಕರೆದ ಮೋದಿ, ಇತರರು ಬೆಳೆಯುವುದನ್ನು ತಡೆಯುವ ಮನೋಭಾವ ಪಕ್ಷದಲ್ಲಿದೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್‌ನ ಆಲೋಚನಾ ಶಕ್ತಿಯನ್ನು ‘ಬೌದ್ಧಿಕ ನಕ್ಸಲರು’ ಆವರಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಹಿಂದೆ ಕಾಡು ಮತ್ತು ಹಳ್ಳಿಗಳಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದ ಮನಸ್ಥಿತಿಯವರು ಈಗ ಪಕ್ಷದೊಳಗೆ ಸೇರಿಕೊಂಡು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಟುವಾಗಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button