*ಬಿಜೆಪಿಯಿಂದ ದೂರ ಉಳಿಯಲು ಕಾರಣ ಬಿಚ್ಚಿಟ್ಟ ರೆಬಲ್ ಶಾಸಕ ಶಿವರಾಮ್ ಹೆಬ್ಬಾರ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕರಾಗಿದ್ದರೂ ಪಕ್ಷದಿಂದ ದೂರ ಉಳಿದಿದ್ದು, ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ, ಕಾಂಗ್ರೆಸ್ ನಾಯಕರೊಂದಿಗೆ ಆಗಾಗ ಕಾಣಿಸಿಕೊಳ್ಳುವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಾವು ಬಿಜೆಪಿಯಿಂದ ದೂರವಿರಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ಶಿವರಾಮ್ ಹೆಬ್ಬಾರ್, ತೊಂದರೆ ಇರದೇ ಯಾರು ಕೂಡ ಪಾರ್ಟಿಯಿಂದ ದೂರವಾಗಲು ಪ್ರಯತ್ನ ಮಾಡುವುದಿಲ್ಲ. ಯತ್ನಾಳ್ ಅವರಿಗೆ ಏನು ತೊಂದರೆಯಾಗಿದೆ ಅಂತ ನನಗೆ ಗೊತ್ತಿದೆ. ನನಗೆ ಏನು ತೊಂದರೆಯಾಗಿದೆ ಅಂತ ಅವರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.
ಸ್ವಜಾತಿ ನಾಯಕರಿಂದಲೇ ಟಾರ್ಗೆಟ್ ಆಗಿದ್ದರಿಂದ ಬಿಜೆಪಿಯಿಂದ ದೂರ ಉಳಿದಿದ್ದೇನೆ ಎಂದರು. ಯಾರೂ ಸುಮ್ಮನೆ ಪಾರ್ಟಿ ಬಿಡಲು ಸಾಧ್ಯವಿಲ್ಲ. ಪಾರ್ಟಿಯನ್ನು ಬಿಡಬೇಕಾದರೆ ಅದರದ್ದೇ ಆದ ಕಾರಣ ಇರುತ್ತದೆ. ಯತ್ನಾಳ್ಗೆ ಯಡಿಯೂರಪ್ಪ ಹಾಗೂ ಮಗನ ತೊಂದರೆ ಆಗಿರಬಹುದು. ನಮಗೆ ಜಿಲ್ಲೆಯಲ್ಲಿ ಇನ್ನೊಬ್ಬರ ತೊಂದರೆಯಾಗಿರಬಹುದು. ತೊಂದರೆ ಇರದೇ ಯಾರು ಕೂಡ ಪಾರ್ಟಿಯಿಂದ ದೂರವಾಗಲು ಯಾವ ಕಾರಣಕ್ಕೂ ಪ್ರಯತ್ನಪಡುವುದಿಲ್ಲ ಎಂದು ಹೇಳಿದರು.
ನಾವೆಲ್ಲಾ ಸಮಾನ ಮನಸ್ಕರು. ಒಂದೇ ಟೇಬಲ್ ಮೇಲೆ ನಾನು, ಸೋಮಶೇಖರ್, ಯತ್ನಾಳ್ ಜೊತೆ ಕುಳಿತವರು. ಅದರ ಸಾಲಿನಲ್ಲಿ ಮೈಸೂರಿನ ಜಿ.ಟಿ.ದೇವೇಗೌಡರೂ ಬರುತ್ತಾರೆ. ಹಾಗಾಗಿ ನಮ್ಮದೇ ಒಂದು ದೊಡ್ಡ ಪಾರ್ಟಿಯೇ ಇದೆ ಎಂದು ತಿಳಿಸಿದರು.
ಪಕ್ಷಕ್ಕೆ ಕರೆತರಲು ಪ್ರಯತ್ನ ನಡೀತಾ ಇದೆ. ಹೇಗಾದರೂ ಮಾಡಿ 2028 ರಲ್ಲಿ ಚುನಾವಣೆ ಗೆಲ್ಲಬೇಕು ಅಂತ ಏನೇನೋ ಪ್ರಯತ್ನ ಸಾಗಿದೆ. ಯತ್ನಾಳ್ ಅವರು ಯಾವ ಕಾರಣಕ್ಕೂ ಬಿಜೆಪಿಯಿಂದ ಕಾಲು ಹೊರಕ್ಕೆ ತೆಗೆದೇ ಇಲ್ಲ. ವೈಯಕ್ತಿಕವಾಗಿ ದ್ವೇಷ, ಭಿನ್ನಾಭಿಪ್ರಾಯ ಇರುವಂತದ್ದು. ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಅಷ್ಟೇ. ನಮ್ಮದು ಆ ಭಿನ್ನಾಭಿಪ್ರಾಯ ಇಲ್ಲ. ನಮ್ಮದು ಜಿಲ್ಲೆಯ ಬಿನ್ನಾಭಿಪ್ರಾಯ ಇದೆ. ಜಿಲ್ಲೆಯ ಸಂಘಟನೆಯಲ್ಲಿ ಬಹಳ ದೊಡ್ಡ ಲೋಪ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡಿದ್ದೆನೋ, ಅದೇ ಪಕ್ಷ ಹಗಲು-ರಾತ್ರಿ ಶ್ರಮಪಟ್ಟು ಸೋಲಿಸಬೇಕು ಎಂಬ ಪ್ರಯತ್ನ ಮಾಡಿತು. ಈ ಸಮಾಜದಿಂದ (ಬ್ರಾಹ್ಮಣ ಸಮಾಜ) ಗೆದ್ದು ಬಂದರೆ ತಮಗೆ ತಮ್ಮ ಸಮಾಜದಿಂದ ಸಿಗುವ ಮಂತ್ರಿ ಪಟ್ಟ ತಪ್ಪಿಹೋಗುತ್ತೆ ಎಂಬ ಯಕ್ಷ ಪ್ರಶ್ನೆಯಿಂದ ಸೋಲಿಸಲು ಪ್ರಯತ್ನ ಮಾಡಿದರು. ಅದಕ್ಕೆ ಪಶ್ಚಾತಾಪ ಅವರೇ ಪಟ್ಟುಕೊಳ್ಳಬೇಕಾಯಿತು ಎಂದರು. 65ರ ವಯಸ್ಸಿಗೆ ಬಂದವರೆಲ್ಲಾ ಸರ್ಕಾರ ಮಾಡುತ್ತೇವೆ ಎಂಬ ಕನಸು ಕಾಣುತ್ತಾರೆ. ಆ ಅನುಭವ ಕೊರತೆ ಕಾರಣದಿಂದ ಕರ್ನಾಟಕದಲ್ಲಿ ಬಿಜೆಪಿ ಹಾಳಾಯ್ತು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




