CrimeFilm & EntertainmentKannada NewsKarnataka NewsLatest

*ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ*: *ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಧನ್ವೀರ್‌ ತಂದೆಯಿಂದ ದೂರು*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಧನ್ವೀರ್ ತಂದೆ ತಿಮ್ಮೇಗೌಡ, ವಿಜಯಲಕ್ಷ್ಮಿ ಹಾಗೂ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಗೆ ಬಂದು ಗಲಾಟೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.

ತಿಮ್ಮೇಗೌಡ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 21ರಂದು ರಾತ್ರಿ ಸುಮಾರು 8.30ರ ವೇಳೆಗೆ ಧನ್ವೀರ್ ಮೈಸೂರಿಗೆ ತೆರಳಿದ್ದರು. ಆ ಸಮಯದಲ್ಲಿ ಮನೆಯಲ್ಲಿ ತಿಮ್ಮೇಗೌಡ, ಪತ್ನಿ ಭಾರತಿ, ತಾಯಿ ಜಯಮ್ಮ ಹಾಗೂ ಮಗಳು ನಳಿನಾಕ್ಷಿ ಇದ್ದರು. ಆಗ ವಿಜಯಲಕ್ಷ್ಮಿ ಮತ್ತು ಮ್ಯಾನೇಜರ್ ನಾಗರಾಜ್ ಮನೆಗೆ ಬಂದು ಕಾಲಿಂಗ್ ಬೆಲ್ ಬಾರಿಸಿದ್ದಾರೆ. ಬಾಗಿಲು ತೆರೆದಾಗ ಧನ್ವೀರ್ ಎಲ್ಲಿ ಎಂದು ಪ್ರಶ್ನಿಸಿದ್ದು, ಧನ್ವೀರ್ ಊರಿನಲ್ಲಿ ಇಲ್ಲ ಹಾಗೂ ತಂದೆ ಊಟ ಮಾಡುತ್ತಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಮನೆಯಲ್ಲಿದ್ದ ಸಂಬಂಧಿ ಅಜಯ್ ಗೌಡ ಅವರನ್ನು ಕಂಡು ರೌಡಿ ಎಂದು ತಪ್ಪಾಗಿ ಭಾವಿಸಿದ ಮ್ಯಾನೇಜರ್ ನಾಗರಾಜ್, ರೌಡಿಗಳನ್ನು ಕರೆಸಿದ್ದೀರಾ ಎಂದು ಕೂಗಾಡಿದ್ದಾರೆ ಎಂದು ತಿಮ್ಮೇಗೌಡ ಆರೋಪಿಸಿದ್ದಾರೆ. ಬಳಿಕ ವಿಜಯಲಕ್ಷ್ಮಿ, ಗೌರವ್ ಶೆಟ್ಟಿ ಎಂಬುವರಿಗೆ ಕರೆ ಮಾಡಿ ಬೋಜಣ್ಣ ಮತ್ತು ಬಾಟಲಿ ಪ್ರಮೋದ್‌ನನ್ನು ಕಳುಹಿಸುವಂತೆ ಹೇಳಿದ್ದಾರೆ. ನಾಗರಾಜ್ ಕೂಡ ಕರೆ ಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಬೋಜ ಮತ್ತು ಬಾಟಲಿ ಪ್ರಮೋದ್ ಮನೆಗೆ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಗೆ ಬಂದ ವ್ಯಕ್ತಿಗಳು ಯಾರು ಎಂದು ಪ್ರಶ್ನಿಸಿದಾಗ, ಬಾಟಲಿ ಪ್ರಮೋದ್ ತಾನು ವಿಜಯಲಕ್ಷ್ಮಿಯ ತಮ್ಮ ಎಂದು ಹೇಳಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೆಂದು ತಮಗೆ ಗೊತ್ತಿದೆ ಎಂದು ಜೋರಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ. ಪೊಲೀಸರಿಗೆ ಕರೆ ಮಾಡುವುದಾಗಿ ತಿಮ್ಮೇಗೌಡ ಹೇಳುತ್ತಿದ್ದಂತೆ, ಎಲ್ಲರೂ ಒಂದೇ ಕಾರಿನಲ್ಲಿ ಕೂಗಾಡಿಕೊಂಡು ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಬೋಜ ಮತ್ತು ಬಾಟಲಿ ಪ್ರಮೋದ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಮ್ಮೇಗೌಡ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಆಧಾರದಲ್ಲಿ ರಾಜಾಜಿನಗರ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button