HealthKannada NewsLatestNational

*ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಖಡಕ್ ಆದೇಶ*

ಪ್ರಗತಿವಾಹಿನಿ ಸುದ್ದಿ: ದೇಶಾದ್ಯಂತ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಸಿಂಗಲ್ ಯೂಸ್ ವೈದ್ಯಕೀಯ ಸಾಧನಗಳು ಮತ್ತು ಬಿಸಾಡಬಹುದಾದ ಶಸ್ತ್ರಚಿಕಿತ್ಸಾ ಪರಿಕರಗಳ ಮರುಬಳಕೆಗೆ ಸಂಪೂರ್ಣ ನಿಷೇಧ ಹೇರಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಆಸ್ಪತ್ರೆಗಳಲ್ಲಿ ‘ಸಿಂಗಲ್-ಯೂಸ್’ ವೈದ್ಯಕೀಯ ಉಪಕರಣಗಳ ಮರುಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದ ಆಸ್ಪತ್ರೆಗಳ ವಿರುದ್ಧ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿದೆ.

ರೋಗಿಗಳಿಗೆ ಮಾರಣಾಂತಿಕ ಸೋಂಕುಗಳು ಹರಡುವುದನ್ನು ತಡೆಯುವುದು ಹಾಗೂ ಸಾಧನ ವೈಫಲ್ಯ, ಆರ್ಥಿಕ ವಂಚನೆಯಂತಹ ಅಪಾಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಒಮ್ಮೆ ಮಾತ್ರ ಬಳಸಬೇಕಾದ ಅತ್ಯಂತ ಸೂಕ್ಷ್ಮ ವೈದ್ಯಕೀಯ ಉಪಕರಣಗಳನ್ನು ಪದೇ ಪದೇ ಬಳಸುವುದರಿಂದ ರೋಗಿಗಳಿಗೆ ಮಾರಣಾಂತಿಕ ಸೋಂಕುಗಳು ಹರಡುವ ಅಪಾಯವಿದೆ ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಗಂಭೀರ ಎಚ್ಚರಿಕೆ ನೀಡಿದೆ. ಡಿಜಿಎಚ್​ಎಸ್ ಮುಖ್ಯಸ್ಥ ಡಾ. ಲವನೀಶ್ ಜಿ. ಕೃಷ್ಣ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಹಾಗೂ ಡ್ರಗ್ ಕಂಟ್ರೋಲರ್‌ಗಳಿಗೆ ಈ ಬಗ್ಗೆ ಸುತ್ತೋಲೆ ಕಳುಹಿಸಿದ್ದಾರೆ.

ಕೇಂದ್ರ ಸರ್ಕಾರ ನಡೆಸಿದ ಪರಿಶೀಲನೆ ವೇಳೆ ಅತ್ಯಂತ ನಿರ್ಣಾಯಕ ವಿಭಾಗಗಳಲ್ಲೇ ಇಂತಹ ಅಪಾಯಕಾರಿ ಅಭ್ಯಾಸ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಹೃದಯಶಾಸ್ತ್ರ ಆಂಜಿಯೋಗ್ರಫಿ ಮತ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗಳಲ್ಲಿ ಬಳಸಲಾಗುವ ಅತ್ಯಂತ ಸೂಕ್ಷ್ಮವಾದ ಕ್ಯಾತಿಟರ್‌ಗಳು (Catheters) ಮತ್ತು ಗೈಡ್‌ವೈರ್‌ಗಳು . ಕಿಡ್ನಿ ವೈಫಲ್ಯದ ರೋಗಿಗಳಿಗೆ ಡಯಾಲಿಸಿಸ್ ಮಾಡುವಾಗ ಬಳಸುವ ಡಯಾಲಿಸರ್ ಮತ್ತು ಸಂಬಂಧಿತ ಟ್ಯೂಬ್‌ಗಳು.

ನ್ಯೂರೋಸರ್ಜರಿ, ಆಂಕೊಲಾಜಿ (ಕ್ಯಾನ್ಸರ್), ಹೃದಯ ಮತ್ತು ನಾಳೀಯ ಶಸ್ತ್ರಚಿಕಿತ್ಸೆಗಳಲ್ಲಿ (CTVS) ಬಳಸುವ ಸರ್ಜಿಕಲ್ ಉಪಕರಣಗಳು ಹಾಗೂ ಸಾಮಾನ್ಯ ಸಿರಿಂಜ್‌ಗಳು,ಸೂಜಿಗಳನ್ನು ಮರುಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಠಿಣ ಆದೇಶ ಹೊರಡಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button