*ಡೀಸೆಲ್ ಸಾಗಿಸುತ್ತಿದ್ದ ಪಿಕಪ್ ಟ್ರಕ್ನಲ್ಲಿ ಭೀಕರ ಸ್ಫೋಟ: ಸಾವಿನ ಸಂಖ್ಯೆ 7ಕ್ಕೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಸೇರಿದಂತೆ ಏಳು ಮಂದಿ ಸಜೀವ ದಹನಗೊಂಡಿದ್ದಾರೆ.
ಶನಿವಾರ ಬೆಳಿಗ್ಗೆ ರಸ್ತೆ ಕಾಮಗಾರಿಗೆ ಬಳಸುವ ಯಂತ್ರಗಳಿಗೆ ಡೀಸೆಲ್ ಪೂರೈಸುವ ವೇಳೆ ಪಿಕಪ್ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ.
ಜಿಲ್ಲೆಯ ಅನಂತಗಿರಿ ಮಂಡಲದ ಪೀಚುಮಾಮಿಡಿ ಗ್ರಾಮದಲ್ಲಿ ಬೆಳಿಗ್ಗೆ ಸುಮಾರು 8.30ಕ್ಕೆ ಈ ಘಟನೆ ನಡೆದಿದೆ. ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ಸೇರಿದಂತೆ ಇತರ ಯಂತ್ರಗಳಿಗೆ ಡೀಸೆಲ್ ಪೂರೈಸಲು ಪಿಕಪ್ ಟ್ರಕ್ ಬಂದಿತ್ತು. ಟ್ರಕ್ನಲ್ಲಿದ್ದ ಡೀಸೆಲ್ ಅನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಡಂಪರ್ ಟ್ರಕ್ ಹಾಗೂ ದ್ವಿಚಕ್ರ ವಾಹನಕ್ಕೂ ವ್ಯಾಪಿಸಿದೆ. ಇದೇ ವೇಳೆ ವಾಹನದಲ್ಲಿದ್ದ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಭೀಕರಗೊಂಡಿದೆ. ಬೆಂಕಿಯ ತೀವ್ರತೆಗೆ ಮೂರು ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ದುರಂತದಲ್ಲಿ ವಿಶಾಖಪಟ್ಟಣದ ಸರ್ಕಾರಿ ಶಾಲಾ ಶಿಕ್ಷಕಿ ಜಾಗರಪು ಸುನೀತಾ (44), ಮಾನ್ಯಾಲ ಮಣಿಕಂಠ (23), ಆದಿಬೋಯಿನ ಗುರು ಪವನ್ (27), ಪಾಂಗಿ ಚಿರಂಜೀವಿ, ಬಿಹಾರ ಮೂಲದ ಜೆಸಿಬಿ ಚಾಲಕ ಟಿಂಕು ಚಂದ್ರವಂಶಿ ಸಿಂಗ್, ಅಸ್ಸಾಂ ಮೂಲದ ನಜೀರ್ ಹಾಗೂ ಮಂಡಲ ನಾರಾಯಣ ರಾವ್ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅನಾಕಪಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್, ಇದು ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡ ಎಂದು ತಿಳಿಸಿದ್ದಾರೆ. ಕಾಮಗಾರಿ ಸ್ಥಳವು ಮುಖ್ಯ ರಸ್ತೆಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವುದರಿಂದ ಡ್ರಮ್ಗಳಲ್ಲಿ ಡೀಸೆಲ್ ಸಾಗಿಸಲಾಗುತ್ತಿತ್ತು. ಡಿಟೋನೇಟರ್ಗಳಿಂದ ಸ್ಫೋಟ ಸಂಭವಿಸಿದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದುರಂತಕ್ಕೆ ಆಂಧ್ರಪ್ರದೇಶದ ಬುಡಕಟ್ಟು ಕಲ್ಯಾಣ ಸಚಿವೆ ಗುಮ್ಮಡಿ ಸಂಧ್ಯಾ ರಾಣಿ ಹಾಗೂ ಗೃಹ ಸಚಿವೆ ವಂಗಲಪೂಡಿ ಅನಿತಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಟಿ. ನಿಶಾಂತಿ ಅವರ ಪ್ರಕಾರ, ಗುತ್ತಿಗೆದಾರರ ವತಿಯಿಂದ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ತಕ್ಷಣದ ಪರಿಹಾರ ನೀಡಲಾಗುವುದು. ಅರ್ಹ ಕುಟುಂಬಗಳಿಗೆ ವಿಮೆ ಸೌಲಭ್ಯ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ದುರ್ಘಟನೆಯಿಂದ ಮೃತರ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯವಾಗಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


