*ಶಿವಮೊಗ್ಗ ದಸರಾ ಆನೆ ಸೋಮಣ್ಣ ರಂಪಾಟ ಪ್ರಕರಣ*: *ಅಧಿಕಾರಿಗಳಿಗೆ ಕ್ಲೀನ್ಚಿಟ್*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ರಂಪಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನಿರಾಳತೆ ಸಿಕ್ಕಿದೆ. ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ಸಿಸಿಎಫ್ ಹನುಮಂತಪ್ಪ ನೇತೃತ್ವದ ಆಂತರಿಕ ತನಿಖಾ ತಂಡ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆನೆಯ ವರ್ತನೆಯೇ ಘಟನೆಗೆ ಕಾರಣ ಎಂಬ ಅಭಿಪ್ರಾಯ ವರದಿಯಲ್ಲಿ ವ್ಯಕ್ತವಾಗಿದೆ.
ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ ನಡೆಸಿದ ಘಟನೆ ಕುರಿತು ಸಿಸಿಎಫ್ ಹನುಮಂತಪ್ಪ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗಿತ್ತು. ಅಂಬಾರಿ ಹೊರಲು ಸೋಮಣ್ಣ ಆನೆಯನ್ನು ಆಯ್ಕೆ ಮಾಡಿದ ಪ್ರಕ್ರಿಯೆ ಹಾಗೂ ಮೆರವಣಿಗೆಗಾಗಿ ನೀಡಿದ್ದ ತರಬೇತಿಯ ವಿವರಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ.
ಸರ್ಕಾರದ ಅನುಮತಿ ದೊರೆತ ಮರುದಿನದಿಂದಲೇ ಆನೆಗಳಿಗೆ ತಾಲೀಮು ಆರಂಭಿಸಲಾಗಿತ್ತು. ಪ್ರತಿದಿನ ಸುಮಾರು ನಾಲ್ಕು ಕಿಲೋಮೀಟರ್ ದೂರ ನಡೆಸಿ ತರಬೇತಿ ನೀಡಲಾಗುತ್ತಿತ್ತು. ಆನೆಗಳಿಗೆ ಪೌಷ್ಟಿಕ ಆಹಾರವನ್ನೂ ಒದಗಿಸಲಾಗಿತ್ತು. ದಸರಾ ಮೆರವಣಿಗೆಯಲ್ಲಿ ಎದುರಾಗುವ ಪಟಾಕಿ ಸದ್ದು, ಜನಸಂದಣಿ ಮತ್ತು ವಾಹನಗಳ ಶಬ್ದಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೆರವಣಿಗೆ ಸಾಗುವ ರಸ್ತೆಯಲ್ಲಿಯೇ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗಿತ್ತು. ಮೂರು ಆನೆಗಳಿಗೂ ಸಮಾನವಾಗಿ ತರಬೇತಿ ನೀಡಲಾಗಿತ್ತು. ಪಶುವೈದ್ಯರು, ಮಾವುತರು ಮತ್ತು ಅನುಭವ ಹೊಂದಿರುವ ನಿವೃತ್ತ ಜಮೇದಾರ್ ಸೇರಿದಂತೆ ಅಧಿಕಾರಿಗಳ ತಂಡ ಚರ್ಚಿಸಿ ಸೋಮಣ್ಣ ಆನೆಯನ್ನು ಅಂಬಾರಿ ಹೊರಲು ಆಯ್ಕೆ ಮಾಡಿತ್ತು.
ಪ್ರತಿ ವರ್ಷದಂತೆ ಅಂಬಾರಿ ಹೊತ್ತ ಆನೆ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿತ್ತು. ಆದರೆ, ಈ ಬಾರಿ ಮೆರವಣಿಗೆಯ ವೇಳೆ ಆನೆ ರಂಪಾಟ ನಡೆಸಿದ ಘಟನೆ ಆತಂಕ ಮೂಡಿಸಿತ್ತು. ಇದೀಗ ಆಂತರಿಕ ತನಿಖೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂಬ ವರದಿ ಸಲ್ಲಿಕೆಯಾಗಿದ್ದು, ಘಟನೆಗೆ ಸೋಮಣ್ಣ ಆನೆಯ ವರ್ತನೆಯೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



