
ಪ್ರಗತಿವಾಹಿನಿ ಸುದ್ದಿ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯದ ಸಮೀಪ ಸಂಭವಿಸಿದೆ.
ಮೃತರನ್ನು ಶಿವಮೊಗ್ಗ ನಗರದ ಜೆ.ಪಿ. ನಗರದ ನಿವಾಸಿಗಳಾದ ನದೀಮ್ (28) ಮತ್ತು ಅಯಾನ್ (18) ಎಂದು ಗುರುತಿಸಲಾಗಿದೆ.
ಭಾನುವಾರ ಸ್ನೇಹಿತರೊಂದಿಗೆ ಗಾಜನೂರು ಬಳಿಯ ತುಂಗಾ ನದಿಗೆ ತೆರಳಿದ್ದ ಯುವಕರು ಈಜಲೆಂದು ನೀರಿಗೆ ಇಳಿದಿದ್ದರು. ಈ ವೇಳೆ ನೀರಿನ ಆಳದ ಅರಿವಿಲ್ಲದೆ ಆಳವಾದ ಪ್ರದೇಶಕ್ಕೆ ತೆರಳಿದ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ಸ್ಥಳದಲ್ಲಿದ್ದವರು ಪ್ರಯತ್ನಿಸಿದರೂ ಇಬ್ಬರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುಂಗಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ನೆರವಿನೊಂದಿಗೆ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಇಬ್ಬರು ಯುವಕರ ಮೃತದೇಹಗಳನ್ನು ಹೊರತೆಗೆಯಲಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



