Kannada NewsKarnataka NewsLatestPolitics

*ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ*: *ವಿಧಾನಸೌಧ ಮುತ್ತಿಗೆ ಯತ್ನ, ಆರ್. ಅಶೋಕ್ ಸೇರಿ ನಾಯಕರು ವಶಕ್ಕೆ!*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಂದೆಯನ್ನು ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ಖರ್ಗೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ತಡೆದಿದ್ದು, ಬ್ಯಾರಿಕೇಡ್ ಹತ್ತಿ ಮುನ್ನುಗ್ಗಲು ಯತ್ನಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಎನ್. ರವಿಕುಮಾರ್, ಸಿ.ಕೆ. ರಾಮಮೂರ್ತಿ, ಡಾ. ಅಶ್ವಥ್ ನಾರಾಯಣ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದಿದ್ದಾರೆ.

ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಆರ್. ಅಶೋಕ್, “ಎಐಸಿಸಿ ಅಧ್ಯಕ್ಷರಿಗೆ ಅರಳು ಮರುಳು ಶುರುವಾಗಿದೆ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಲು ಇಬ್ಬರು ಖರ್ಗೆ ಸಾಕು. ಒಬ್ಬರು ಮಲ್ಲಿಕಾರ್ಜುನ ಖರ್ಗೆ, ಇನ್ನೊಬ್ಬರು ಪ್ರಿಯಾಂಕ್ ಖರ್ಗೆ” ಎಂದು ಟೀಕಿಸಿದ್ದಾರೆ. ಈ ವಯಸ್ಸಿನಲ್ಲಿ ದೇವರ ಜಪ ಮಾಡಿಕೊಂಡಿರಬೇಕಿತ್ತು. ಆದರೆ ಪ್ರತಿದಿನ ಮೋದಿ ಬಗ್ಗೆ ಮಾತನಾಡುತ್ತಾ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖರ್ಗೆ ಹೇಳಿಕೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದ ಅಶೋಕ್, ಪ್ರಧಾನಿ ಮೋದಿ ಅವರ ಕುಟುಂಬವನ್ನು ರಾಜಕೀಯ ಟೀಕೆಗೆ ಎಳೆದು ತರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಖರ್ಗೆ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನೂ ಪ್ರಸ್ತಾಪಿಸಿ, ಇಂತಹ ಭಾಷೆ ಬಳಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಖರ್ಗೆ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರಧಾನಿ ಮೋದಿ ಕುರಿತ ಹೇಳಿಕೆ ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ ಮತ್ತು ಮಾನವೀಯತೆಯ ಅಣಕ ಎಂದು ಟೀಕಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ದೀರ್ಘ ಅನುಭವ ಹೊಂದಿರುವ ಖರ್ಗೆ ಮಾತಿನಲ್ಲಿ ಸಂಯಮ ತೋರಬೇಕಿತ್ತು ಎಂದು ಹೇಳಿದ್ದಾರೆ.

“ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎಂದು ಪುರಂದರದಾಸರು ಹೇಳಿರುವುದನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಪ್ರಧಾನಿ ಮೋದಿ ಅವರ ದಿವಂಗತ ತಂದೆಯನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡಿರುವುದು ಖಂಡನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಖರ್ಗೆ ಹೇಳಿಕೆ ಕ್ಷಮಾರ್ಹವಲ್ಲ, ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಖರ್ಗೆ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ. ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದತ್ತ ತೆರಳುತ್ತಿದ್ದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button