
ಪ್ರಗತಿವಾಹಿನಿ ಸುದ್ದಿ: ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ರೈಲು ನಿಲ್ದಾಣಗಳ ಕೌಂಟರ್‌ಗಳಲ್ಲಿ ಅಂದರೆ ಆಫ್‌ಲೈನ್ ನಲ್ಲಿ ಖರೀದಿಸಿದ ಎಲ್ಲಾ ಟಿಕೆಟ್‌ಗಳಿಗೆ ಕಡ್ಡಾಯವಾಗಿ ವಿಮೆ ಸೌಲಭ್ಯ ಒದಗಿಸುವಂತೆ ಭಾರತೀಯ ರೈಲ್ವೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ರೈಲ್ವೆ ಕೌಂಟರ್‌ಗಳಲ್ಲಿ ವಿಮೆ ಸೌಲಭ್ಯ ಕಲ್ಪಿಸಿರುವುದನ್ನು ಖಚಿತಪಡಿಸಿಕೊಳ್ಳುವಂತೆ ರೈಲ್ವೆ ವಲಯಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ ಸೌಲಭ್ಯ ಜಾರಿಗೆ ಬರುತ್ತಿರುವ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದೆ.
ಒಡಿಶಾದ ಬಾಲಾಸೋರ್‌ನಲ್ಲಿ 2023ರ ಜೂನ್‌ನಲ್ಲಿ ಸಂಭವಿಸಿದ ರೈಲು ಅಪಘಾತ ಬಳಿಕ ಸುರಕ್ಷತಾ ಕ್ರಮಗಳ ಕುರಿತು ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಹಸಾನುದ್ದಿನ್ ಅಮಾನುಲ್ಲಾಹ್ ಹಾಗೂ ಆರ್.ಮಾಧವನ್ ನೇತೃತ್ವದ ಪೀಠ, ರೈಲ್ವೆ ಮಂಡಳಿಯಲ್ಲಿ ಸಾಕಷ್ಟು ಅನುದಾನವಿದ್ದರೂ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲು ವಿಫಲವಾದ ರೈಲ್ವೆ ಸಚಿವಾಲಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಐಆರ್‌ಸಿಟಿಸಿ ಮಾರ್ಗಸೂಚಿಗಳ ಪ್ರಕಾರ ವಿಮಾ ಸೌಲಭ್ಯ ಭಾರತೀಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ. ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಖಚಿತಗೊಂಡ, ಭಾಗಶಃ ಖಚಿತಗೊಂಡ, ಆರ್‌ಎಸಿ ಟಿಕೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಇ-ಟಿಕೆಟ್‌ಗಳಿಗೆ ವಿಧಿಸುವ ಪ್ರೀಮಿಯಂ ಶುಲ್ಕದಂತೆ ಕೌಂಟರ್ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ಪ್ರತಿ ಟಿಕೆಟ್‌ಗೆ 45 ಪೈಸೆ ಪ್ರೀಮಿಯಂ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರೀಮಿಯಂ ಮೊತ್ತವನ್ನು ಡಿಜಿಟಲ್ ಪಾವತಿ ಮೂಲಕ ಮಾತ್ರ ಪಾವತಿಸಬೇಕಿದೆ.
ಈ ಯೋಜನೆಯಡಿ ರೈಲು ಅಪಘಾತಗಳು ಅಥವಾ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಸಾವು, ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಭಾಗಶಃ ಅಂಗವೈಕಲ್ಯ, ಗಾಯಗೊಂಡಾಗ ಆಸ್ಪತ್ರೆಗೆ ದಾಖಲಾದ ವೆಚ್ಚಗಳು ಹಾಗೂ ಮೃತದೇಹವನ್ನು ಸಾಗಿಸುವ ವೆಚ್ಚಗಳನ್ನು ವಿಮಾ ಪಾಲಿಸಿ ಒಳಗೊಂಡಿರಲಿದೆ. 2 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗೆ ವಿಮಾ ಮೊತ್ತ ಒದಗಿಸಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



