CrimeKannada NewsKarnataka NewsLatest

*ತಂದೆಯ ಕಣ್ಣೆದುರೇ DRDO ಹಿರಿಯ ವಿಜ್ಞಾನಿ ದುರಂತ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ತಂದೆಯ ಕಣ್ಣೆದುರೇ ಡಿಆರ್‌ಡಿಓದ ಹಿರಿಯ ವಿಜ್ಞಾನಿಯೊಬ್ಬರು ದುರಂತ ಅಂತ್ಯ ಕಂಡಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಂಗಸಂಸ್ಥೆಯಾದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿ ಗ್ರೇಡ್ ‘ಎಫ್’ ಹಿರಿಯ ವಿಜ್ಞಾನಿಯಾಗಿದ್ದ 47 ವರ್ಷದ ಶರದ್ ಕಟಿಯಾರ್, ಅಕ್ಟೋಬರ್ 21ರಂದು ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಕಣ್ಣೇದುರೆ ಮಗನನ್ನು ಕಳೆದುಕೊಂಡ ತಂದೆ ಕಂಗಾಲಾಗಿದ್ದಾರೆ.

ಮೃತ ಶರದ್ ಕಟಿಯಾರ್ ಕಳೆದ ಕೆಲವು ತಿಂಗಳುಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಘಟನೆ ನಡೆದ ದಿನವೂ ನಿಮಾನ್ಸ್‌ಗೆ ತೆರಳಿ ಮನೆಗೆ ಮರಳಿದ್ದರು.

ಅಕ್ಟೋಬರ್ 21ರ ಸಂಜೆ ಸುಮಾರು 7.30ರ ವೇಳೆಗೆ ಶರದ್ ಅವರ ಚಲನವಲನದಲ್ಲಿ ಬದಲಾವಣೆ ಗಮನಿಸಿದ ಅವರ ವೃದ್ಧ ತಂದೆ, ಮಗನ ಹಿಂದೆಯೇ ಮನೆಯೊಳಗೆ ಓಡಾಡುತ್ತಿದ್ದರು. ಈ ನಡುವೆ ಶರದ್ ಏಕಾಏಕಿ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳನ್ನು ಹತ್ತಿ ನಾಲ್ಕನೇ ಮಹಡಿಗೆ ತೆರಳಿದ್ದಾರೆ.

ಮಗನನ್ನು ತಡೆಯುವ ಉದ್ದೇಶದಿಂದ ತಂದೆಯೂ ಅವರ ಹಿಂದೆಯೇ ಧಾವಿಸಿದ್ದಾರೆ. ಆದರೆ ವಯಸ್ಸಿನ ಕಾರಣದಿಂದ ವೇಗವಾಗಿ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗದೆ ಆಯಾಸಗೊಂಡಿದ್ದಾರೆ. ತಂದೆ ತಲುಪುವಷ್ಟರಲ್ಲಿ ಶರದ್ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಮತ್ತು ಸ್ಥಳೀಯರು ಪ್ರಯತ್ನಿಸಿದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಆರಂಭದಲ್ಲಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ಕುರಿತು ಕೆ.ಆರ್. ಪುರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button