Kannada NewsKarnataka NewsLatest

*ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ*: *716 ವಿದೇಶಿ ಪ್ರಜೆಗಳ ಹೆಸರು ಡಿಲೀಟ್*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ 716 ವಿದೇಶಿ ಪ್ರಜೆಗಳ ಹೆಸರುಗಳನ್ನು ಚುನಾವಣಾ ಆಯೋಗ ತೆಗೆದುಹಾಕಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ನೇಪಾಳದ 545 ಪ್ರಜೆಗಳ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ವಿದೇಶಿ ಪೌರತ್ವ ಹೊಂದಿದ್ದವರು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನರ್ಹ ಮತದಾರರೆಂದು ಗುರುತಿಸಲಾದ 583 ಜನರ ಪೈಕಿ ನೇಪಾಳದ 545 ಪ್ರಜೆಗಳ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ವ್ಯಾಪ್ತಿಯಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆನಡಾ ಹಾಗೂ ದುಬೈ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳು ಮತದಾರರ ಗುರುತಿನ ಚೀಟಿ ಹೊಂದಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇಪಾಳದ 17, ಬ್ರಿಟನ್‌ನ 2, ಕೆನಡಾದ 5, ಆಸ್ಟ್ರೇಲಿಯಾದ 6 ಹಾಗೂ ಅಮೆರಿಕದ 6 ಪ್ರಜೆಗಳ ಹೆಸರುಗಳನ್ನು ಅಳಿಸಲಾಗಿದೆ. ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ನಾರ್ವೆ ದೇಶಗಳ ತಲಾ ಒಬ್ಬರ ಹೆಸರೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 40 ವಿದೇಶಿ ಪ್ರಜೆಗಳ ಹೆಸರುಗಳನ್ನು ಕೈಬಿಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನೇಪಾಳ, ಪಾಕಿಸ್ತಾನ, ಅಮೆರಿಕ ಮತ್ತು ಬಾಂಗ್ಲಾದೇಶದ ಪ್ರಜೆಗಳಿಗೆ ಸಂಬಂಧಿಸಿದ 22 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ನೇಪಾಳ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ 44 ಪ್ರಜೆಗಳ ಹೆಸರುಗಳನ್ನು ತೆಗೆದುಹಾಕಲಾಗಿದೆ. ಬೆಳಗಾವಿ ಹಾಗೂ ಹಾಸನ ಜಿಲ್ಲೆಗಳಲ್ಲಿಯೂ ನೇಪಾಳ ಮತ್ತು ಶ್ರೀಲಂಕಾದ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಪತ್ತೆಯಾಗಿದೆ.

ಹೆಸರುಗಳು ಹೇಗೆ ಪತ್ತೆಯಾದವು?

2002ರ ಮತದಾರರ ಪಟ್ಟಿಯಲ್ಲಿನ ದಾಖಲೆಗಳೊಂದಿಗೆ ವಿವರಗಳು ಹೊಂದಿಕೆಯಾಗದಿರುವುದು ಮತ್ತು ವಿಶೇಷ ಪರಿಷ್ಕರಣೆಯ ವೇಳೆ ಸಲ್ಲಿಸಲಾದ ಗಣತಿ ನಮೂನೆಗಳ ಪರಿಶೀಲನೆಯ ಸಂದರ್ಭದಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ಪ್ರಕ್ರಿಯೆಯ ಮೂಲಕ ಸಂಬಂಧಪಟ್ಟ ವ್ಯಕ್ತಿಗಳ ಅರ್ಹತೆಯನ್ನು ಪರಿಶೀಲಿಸಲಾಗಿದೆ.

ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದರೂ, ಶಾಲಾ ಪ್ರಮಾಣಪತ್ರ, ಆಸ್ತಿ ದಾಖಲೆಗಳು ಸೇರಿದಂತೆ ಅಗತ್ಯ ದಾಖಲೆಗಳ ವಿವರಗಳನ್ನು ನೀಡಲು ಸಂಬಂಧಪಟ್ಟವರಿಗೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ಪೌರತ್ವ ಹೊಂದಿರುವವರು ಭಾರತೀಯ ಮತದಾರರ ಪಟ್ಟಿಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂಬ ಹಿನ್ನೆಲೆಯಲ್ಲಿ ಪರಿಶೀಲನೆಯ ಬಳಿಕ ಈ ಹೆಸರುಗಳನ್ನು ತೆಗೆದುಹಾಕಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button