*ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್*: *ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ ಪುನೀತ್*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಸೇರಿದಂತೆ ಆರೋಪಿಗಳ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದ ಸಾಕ್ಷಿ ವಿಚಾರಣೆ ವೇಳೆ ಪ್ರತ್ಯಕ್ಷ ಸಾಕ್ಷಿ ಪುನೀತ್ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಶೆಡ್ ಬಳಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಯಾವುದೇ ಆರೋಪಿಗಳು ಬಂದಿರಲಿಲ್ಲ ಎಂದು ಹೇಳಿಕೆ ನೀಡಿದ್ದು, ನ್ಯಾಯಾಲಯ ಪುನೀತ್ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿದೆ.
ಸಾಕ್ಷಿ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಯಾವುದೇ ಆರೋಪಿಗಳನ್ನು ಘಟನಾ ಸ್ಥಳದಲ್ಲಿ ನೋಡಿಲ್ಲ ಎಂದು ಪುನೀತ್ ತಿಳಿಸಿದ್ದಾರೆ. ಈ ಹಿಂದೆ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಅಡಿಯಲ್ಲಿ ನೀಡಿದ್ದ ಹೇಳಿಕೆಯಿಂದಲೂ ಹಿಂದೆ ಸರಿದಿದ್ದಾರೆ. ಹೀಗಾಗಿ ಹಿಂದಿನ ಹೇಳಿಕೆ ಮತ್ತು ಈಗ ನೀಡಿರುವ ಹೇಳಿಕೆ ನಡುವೆ ವ್ಯತ್ಯಾಸ ಕಂಡುಬಂದಿದೆ.
ಪುನೀತ್ ಹೇಳಿಕೆಯ ಭಾಗವನ್ನು ದಾಖಲಿಸಿಕೊಂಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿದೆ. ಪ್ರಕರಣದ ಪ್ರತ್ಯಕ್ಷ ಸಾಕ್ಷಿಯೇ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದಿರುವುದು ವಿಚಾರಣೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.
ಪುನೀತ್ ಡಿ ಕಂಪೆನಿ ಫ್ಯಾನ್ ಪೇಜ್‌ನ ಅಡ್ಮಿನ್ ಹಾಗೂ ದರ್ಶನ್ ಆಪ್ತ ಎನ್ನಲಾಗಿದೆ. ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪುನೀತ್ ವಿಚಾರಣೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಸಮನ್ಸ್ ಜಾರಿ ಮಾಡಲಾಗಿತ್ತು. ಬಳಿಕ ಬಂಧನ ವಾರಂಟ್ ಕೂಡ ಹೊರಡಿಸಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾದ ಪುನೀತ್, ಆರೋಪಿಗಳನ್ನು ಘಟನಾ ಸ್ಥಳದಲ್ಲಿ ನೋಡಿಲ್ಲ ಎಂದು ಹೇಳಿಕೆ ನೀಡಿರುವುದು ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




