
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಪಟಾಕಿಗಳದ್ದೇ ಕಾರುಬಾರು. ಪಟಾಕಿ ಇಲ್ಲದೇ ಬೆಳಕಿನ ಹಬ್ಬ ದೀಪಾವಳಿಯೇ ಇಲ್ಲ ಎಂಬಷ್ಟರ ಮಟ್ಟಿಗೆ ಬೆಸೆದುಕೊಂಡಿದ್ದೇವೆ. ಈ ನಡುವೆ ಪಟಾಕಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ದೀಪಾವಳಿಗೂ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಪಟಾಕಿ ಬಳಕೆ ನಿಯಂತ್ರಣದ ಕುರಿತಾದ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ನಡೆಸಿತು.
ವಿಚಾರಣೆ ವೇಳೆ, ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನಿಷೇಧದ ಬದಲು ಜಾಗೃತಿ ಮೂಡಿಸುವುದು ಉತ್ತಮ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಪಟಾಕಿ ಸಂಪೂರ್ಣ ನಿಷೇಧ ಹೇರುವ ಬದಲು ಜಾಗೃತಿ ಮೂಡಿಸಲು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಂತಹ ದೇಶದ ಪ್ರಭಾವಿ ವ್ಯಕ್ತಿಗಳ ನೆರವು ಪಡೆಯುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಸೂಕ್ತವಲ್ಲ. ಹಬ್ಬ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದರಿಂದ ಮಾಲಿನ್ಯ ನಿಯಂತ್ರಣದ ಜೊತೆಗೆ ಹಬ್ಬದ ಆಚರಣೆಯಗೂ ಪ್ರಾಮುಖ್ಯತೆ ನೀಡಬೇಕು ಎಂದಿದೆ.
ಜೊತೆಗೆ ಮಾಲಿನ್ಯ ತಡೆಗಟ್ಟಲು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವಿಶೇಷವಾಗಿ ದೀಪಾವಳಿ ಹಬ್ಬದ ಆಸುಪಾಸಿನ ಎರಡು ದಿನಗಳಲ್ಲಿ ಮಾಲಿನ್ಯ ಮಟ್ಟವು ಅಪಾಯಕಾರಿ ಹಂತ ತಲುಪದಂತೆ ತಡೆಯಲು ಆಡಳಿತ ವರ್ಗವು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಆದೇಶ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


