*ವೆಜ್ ಬಿರಿಯಾನಿ ಆರ್ಡರ್ ಮಾಡಿದ್ರೆ ಚಿಕನ್ ಬಿರಿಯಾನಿ ತಂದುಕೊಟ್ಟ ಹೋಟೆಲ್ ಸಿಬ್ಬಂದಿ*; *ಅರಿವಾಗದೇ ತಿಂದ ಕುಟುಂಬ: ಮುಂದೇನಾಯ್ತು*

ಪ್ರಗತಿವಾಹಿನಿ ಸುದ್ದಿ: ಏರ್ ಪೋರ್ಟ್ ನಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಸಸ್ಯಹಾರಿ ಕುಟುಂಬವೊಂದು ವೆಜ್ ಬಿರಿಯಾನಿ ಆರ್ಡರ್ ಮಾಡಿದಾಅಗ ಹೋಟೆಲ್ ಸಿಬ್ಬಂದಿ ಚಿಕನ್ ಬಿರಿಯಾನಿ ನೀಡಿದ್ದು, ಆರಂಭದಲ್ಲಿ ಅರಿವಾಗದೇ ಕುಟುಂಬದವರು ಸೇವಿಸಿದ್ದಾರೆ. ಟೇಬಲ್ ಮೇಲಿದ್ದ ಆಹರವನ್ನು ಸರೀಯಾಗಿ ಪರಿಶೀಲಿಸಿದಾಗ ಅದು ಚಿಕನ್ ಬಿರಿಯಾನಿ ಎಂದು ಗೊತ್ತಾಗಿ ಶಾಕ್ ಆಗಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಕುಟುಂಬದವರು ಹೋಟೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೆಜ್ ಬಿರಿಯಾನಿ ಆರ್ಡರ್ ಮಾಡಿದಾಗ ಚಿಕನ್ ಬಿರಿಯಾನಿ ತಂದು ಕೊಟ್ಟಿದ್ದಾರೆ. ಸಸ್ಯಾಹಾರಿ ಕುಟುಂಬದ ಮಕ್ಕಳು ಅರಿವಿಲ್ಲದೆ ಮಾಂಸಾಹಾರ ಸೇವಿಸಿದ್ದಾರೆ ಎನ್ನಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಗೇಟ್ ಸಂಖ್ಯೆ 16-17ರ ಸಮೀಪವಿರುವ ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ.
ಪಿಯೂಷ್ ಅಗರ್ವಾಲ್ ಎಂಬುವವರ ಕುಟುಂಬ ರೆಸ್ಟೋರೆಂಟ್‌ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿತ್ತು. ರೆಸ್ಟೋರೆಂಟ್ ನೀಡಿದ ಬಿಲ್‌ನಲ್ಲಿಯೂ ವೆಜ್ ಬಿರಿಯಾನಿ ಎಂದೇ ನಮೂದಿಸಲಾಗಿತ್ತು. ಆದರೆ ಕುಟುಂಬಕ್ಕೆ ನೀಡಿದ ಆಹಾರದಲ್ಲಿ ಚಿಕನ್ ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ. ಸಸ್ಯಾಹಾರಿ ಕುಟುಂಬದ ಸದಸ್ಯರು ಹಾಗೂ ಮಕ್ಕಳು ಆಹಾರದಲ್ಲಿ ಮಾಂಸ ಇರುವುದನ್ನು ಅರಿಯದೆ ಸೇವಿಸಿದ್ದಾರೆ ಎಂದು ಪಿಯೂಷ್ ಅಗರ್ವಾಲ್ ಆರೋಪಿಸಿದ್ದಾರೆ.
ಆಹಾರದಲ್ಲಿ ಚಿಕನ್ ಇರುವುದನ್ನು ಗಮನಿಸಿದ ಕುಟುಂಬಸ್ಥರು ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆಹಾರದಲ್ಲಿ ಚಿಕನ್ ಇರುವುದನ್ನು ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಶೆಫ್ ಒಪ್ಪಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದರೂ ಮಾಂಸಾಹಾರ ನೀಡಿರುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕುಟುಂಬಸ್ಥರು ಕಿಡಿಕಾರಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪಿಯೂಷ್ ಅಗರ್ವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಪಿಯೂಷ್ ಅಗರ್ವಾಲ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಆಡಳಿತದ ಗಮನ ಸೆಳೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.



