*ಬೆಂಗಳೂರಿನಲ್ಲಿ ಮತ್ತೊಂದು ಸ್ಫೋಟಕ ವಸ್ತು ಪತ್ತೆ*: *ಡೈನಮೈಟ್ ಪತ್ತೆಯಿಂದ ಆತಂಕ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಮತ್ತೊಂದು ಸ್ಫೋಟಕ ವಸ್ತು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪುಲಿಕೇಶಿನಗರದಲ್ಲಿ ಐಇಡಿ ಸ್ಫೋಟದ ಘಟನೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬಂಡೆ ಒಡೆಯಲು ಬಳಸುವ ಡೈನಮೈಟ್ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.
ಕ್ವಾರಿಗಳಲ್ಲಿ ಬಳಸುವ ಸ್ಫೋಟಕ ವಸ್ತುವನ್ನು ಯಾರೋ ತಂದು ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಭದ್ರತೆ ಹೆಚ್ಚಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊಣ್ಣೇನಹಳ್ಳಿ ಸರ್ಕಲ್ ಬಳಿ ನಡೆದಿದೆ.
ಸ್ಥಳದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಫೋಟಕವನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲು ಸಿದ್ಧತೆ ನಡೆಸಿದ್ದಾರೆ.
ಸ್ಫೋಟಕ ವಸ್ತುವನ್ನು ಅಲ್ಲಿಗೆ ತಂದಿಟ್ಟವರು ಯಾರು? ಯಾವ ಉದ್ದೇಶದಿಂದ ಇಡಲಾಗಿದೆ? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



