Film & EntertainmentKannada NewsKarnataka NewsLatest

*ಬಾಂಬ್ ಬೆದರಿಕೆಗೂ ಜಗ್ಗದ ಬಿಗ್ ಬಿ*: *ಬುಲೆಟ್‌ಪ್ರೂಫ್ ಕವಚದ ಹಿಂದೆ ಅಭಿಮಾನಿಗಳಿಗೆ ಕೈಮುಗಿದ ಅಮಿತಾಭ್!*

ಪ್ರಗತಿವಾಹಿನಿ ಸುದ್ದಿ: ಬಾಂಬ್ ಬೆದರಿಕೆ ಕರೆ ಬಂದಿದ್ದರೂ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಭಾನುವಾರದ ಸಂಪ್ರದಾಯವನ್ನು ಕೈಬಿಟ್ಟಿಲ್ಲ. ಮುಂಬೈನ ಜಲ್ಸಾ ನಿವಾಸದ ಹೊರಗೆ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಬಿಗ್ ಬಿ ಭೇಟಿಯಾಗಿದ್ದಾರೆ. ಆದರೆ ಈ ಬಾರಿ ಭದ್ರತೆಯ ದೃಷ್ಟಿಯಿಂದ ಬುಲೆಟ್‌ಪ್ರೂಫ್ ಗ್ಲಾಸ್ ಕವರ್ ಹಿಂದೆ ನಿಂತು ಅಭಿಮಾನಿಗಳಿಗೆ ಕೈಮುಗಿದು ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಪುತ್ರ ಅಭಿಷೇಕ್ ಬಚ್ಚನ್ ಕೂಡ ತಂದೆಯ ಜೊತೆಗಿದ್ದರು.

84 ವರ್ಷದ ಅಮಿತಾಭ್ ಬಚ್ಚನ್ ಪ್ರತೀ ಭಾನುವಾರ ಜಲ್ಸಾ ಬಂಗಲೆಯ ಹೊರಗೆ ಬಂದು ಅಭಿಮಾನಿಗಳನ್ನು ಭೇಟಿಯಾಗುವುದು ವಾಡಿಕೆ. ಆದರೆ ಕಳೆದ ವಾರ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು. ಹೀಗಾಗಿ ಗ್ಲಾಸ್ ಎನ್‌ಕ್ಲೋಸರ್ ಒಳಗಿನಿಂದಲೇ ಅಭಿಮಾನಿಗಳಿಗೆ ಕೈಬೀಸಿ ಶುಭಾಶಯ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ತಂದೆಯ ಪಕ್ಕದಲ್ಲೇ ನಿಂತು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದರು. ತಂದೆಯ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದು ಕಂಡುಬಂದಿದೆ. ಈ ಅಪರೂಪದ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇತ್ತೀಚೆಗೆ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆ ಕುರಿತು ಆತಂಕ ವ್ಯಕ್ತವಾಗಿತ್ತು. ಇದೇ ವೇಳೆ ಅಮಿತಾಭ್ ಬಚ್ಚನ್ ಅವರ ಜಲ್ಸಾ ನಿವಾಸವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಇಷ್ಟೆಲ್ಲ ಭದ್ರತಾ ಆತಂಕಗಳ ನಡುವೆಯೂ ಅಮಿತಾಭ್ ಬಚ್ಚನ್ ತಮ್ಮ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ‘ಕೌನ್ ಬನೇಗಾ ಕರೋಡ್‌ಪತಿ 18’ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಅಲ್ಲದೆ, ‘ಕಲ್ಕಿ 2898 ಎಡಿ’ ಸಿನಿಮಾದ ಮುಂದಿನ ಭಾಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Related Articles

Back to top button