*ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ಮತ್ತೊಂದು ಟ್ವಿಸ್ಟ್*: *ರಕ್ಷಣೆ ಕೇಳಿಬಂದ ಮಹಿಳೆಯನ್ನೇ ಸ್ಟಿಂಗ್ ಗೆ ಬಳಸಿಕೊಂಡ್ರಾ ಕೃಪಾ ಆಳ್ವ?*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಕೃಪಾ ಆಳ್ವ ಅವರ ಹಿಂದಿನ ಕಾರ್ಯವೈಖರಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಕೃಪಾ ಆಳ್ವ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಇ-ಮೇಲ್ ಮೂಲಕ ದೂರು ನೀಡಿದ್ದರು. ಆದರೆ, ಆ ದೂರಿನ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಬದಲು ಪ್ರಕರಣವನ್ನು ಮುಚ್ಚಿಹಾಕಲು ಕೃಪಾ ಆಳ್ವ ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಕೃಪಾ ಆಳ್ವ 2015ರಿಂದ 2018ರವರೆಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಇ-ಮೇಲ್ ಮೂಲಕ ದೂರು ದಾಖಲಿಸಿದ್ದರು. ಮಹಿಳೆ ನೀಡಿದ್ದ ದೂರಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಬೇಕಿತ್ತು ಅದರೆ ಹಾಗೆ ಮಾಡದೇ ದೂರು ನೀಡಲು ಬಂದಿದ್ದ ಮಹಿಳೆಯನ್ನೇ ಸ್ಟಿಂಗ್ ಆಪರೇಷನ್ ಗೆ ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಿಳೆ ದೂರು ನೀಡಲು ಬಂದಿದ್ದರೂ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವ ಬದಲು ಪ್ರಕರಣವನ್ನು ಮುಚ್ಚಿಹಾಕಲು ಕೃಪಾ ಆಳ್ವ ಪ್ರಯತ್ನಿಸಿದ್ದರು ಎಂಬ ಆರೋಪ ಇದೆ. ಮಹಿಳೆಯ ದೂರಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ತನಿಖೆಗೆ ವಹಿಸುವ ಬದಲು ಅದನ್ನು ನಿರ್ಲಕ್ಷಿಸಲಾಗಿತ್ತೇ ಎಂಬ ಪ್ರಶ್ನೆಯೂ ಎದ್ದಿದೆ. ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದ ವ್ಯಕ್ತಿಯ ವಿರುದ್ಧವೇ ಇಂತಹ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ನೀಡಿದೆ.
ಅಲ್ಲದೇ 2018ರಿಂದಲೂ ಕೃಪಾ ಆಳ್ವ ಅವರು ಕೇರಳ ಮೂಲದ ಮಹಿಳೆಯ ಸಂಪರ್ಕದಲ್ಲಿದ್ದರು ಎಂಬುದು. 2023ರಲ್ಲಿ ಮಹಿಳೆಯ ಹೇಳಿಕೆಯನ್ನು ವಿಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಅಂದರೆ, ಮಹಿಳೆ ಈ ಹಿಂದೆ ನೀಡಿದ್ದ ದೂರಿನ ವಿಚಾರ ಮತ್ತು ನಂತರದ ಸಂಪರ್ಕದ ಹಿನ್ನೆಲೆ ಇದೀಗ ಸ್ಟಿಂಗ್ ಪ್ರಕರಣದ ಚರ್ಚೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ.
ಮಹಿಳೆ ಯಾವ ಕಾರಣಕ್ಕೆ ಇ-ಮೇಲ್ ಮೂಲಕ ದೂರು ನೀಡಿದ್ದರು? ಆ ದೂರಿನ ಬಗ್ಗೆ ಆಯೋಗದ ಅಧ್ಯಕ್ಷೆಯಾಗಿದ್ದ ಕೃಪಾ ಆಳ್ವ ಕೈಗೊಂಡ ಕ್ರಮಗಳೇನು? ದೂರು ಬಂದಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರೇ? 2023ರಲ್ಲಿ ಮಹಿಳೆಯ ಹೇಳಿಕೆಯನ್ನು ವಿಡಿಯೋ ರೂಪದಲ್ಲಿ ದಾಖಲಿಸಿಕೊಳ್ಳುವ ಅಗತ್ಯ ಏನಿತ್ತು? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.




