*ಸಿಟ್ಟಿನಲ್ಲಿ ಆ ಪದ ಬಳಕೆ ಮಾಡಿದ್ದೆ*: *ಕಾಂಗ್ರೆಸ್ ನಾಯಕರಿಗೆ ವಿಜಯೇಂದ್ರ ಕ್ಷಮೆಯಾಚನೆ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊನೆಗೂ ಕ್ಷಮೆಯಾಚಿಸಿದ್ದಾರೆ. ತಮ್ಮ ಮಾತಿನಿಂದ ಕಾಂಗ್ರೆಸ್ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ಹೇಳಿರುವ ವಿಜಯೇಂದ್ರ, ಉದ್ದೇಶಪೂರ್ವಕವಾಗಿ ಆ ಪದಗಳನ್ನು ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆಯಲ್ಲಿ ರಾಜ್ಯ ಸರ್ಕಾರದ ಮೀಸಲಾತಿ ನೀತಿ, ಸರ್ಕಾರಿ ಹುದ್ದೆಗಳ ಭರ್ತಿ ಮತ್ತು ಹಾಲಿನ ದರ ಏರಿಕೆ ವಿಚಾರವಾಗಿ ಮಾತನಾಡುವಾಗ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು. “ಈ ನನ್ ಮಕ್ಕಳು ಕಾಂಗ್ರೆಸ್ನವರು ಇದ್ದಾರಲ್ಲಾ…” ಎಂದು ಏಕವಚನದಲ್ಲೇ ಲೇವಡಿ ಮಾಡಿದ್ದರು. ಈ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮೂರು ದಿನಗಳೊಳಗೆ ವಿಜಯೇಂದ್ರ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ನಿವಾಸದ ಸುತ್ತಮುತ್ತ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದರು.
ಈ ಬೆಳವಣಿಗೆಗಳ ನಡುವೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಮೀಸಲಾತಿ ಮತ್ತು ಕೆಪಿಎಸ್ಸಿ ವಿಚಾರವಾಗಿ ಮಾತನಾಡುವಾಗ ಸಿಟ್ಟಿನಲ್ಲಿ ಆ ಪದ ಬಳಕೆಯಾಗಿದೆ ಎಂದು ಹೇಳಿದ್ದಾರೆ.
ಆದರೆ, ಕ್ಷಮೆಯಾಚನೆಯ ನಡುವೆಯೂ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ವಿಜಯೇಂದ್ರ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣವನ್ನು ಪ್ರಸ್ತಾಪಿಸಿ, ಸರ್ಕಾರ ಕುಮಾರಸ್ವಾಮಿ ಅವರನ್ನು ಮಾತ್ರ ಗುರಿಯಾಗಿಸಿಕೊಂಡಿದೆ. ಸ್ಟಿಂಗ್ ಮಾಡಿದವರು ಯಾರು ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಗೆಲುವನ್ನು ಕಾಂಗ್ರೆಸ್ ಸಹಿಸಿಕೊಳ್ಳುತ್ತಿಲ್ಲ. ರಾಹುಲ್ ಗಾಂಧಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಕೋಲಾರದಲ್ಲಿ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.




