*ಮಂತ್ರಿ ಎಂದರೂ ಬಿಡದ ಸೈಬರ್ ವಂಚಕರು*: *ಎಂ.ಬಿ. ಪಾಟೀಲರಿಗೂ ಬಂತು ಬೋಗಸ್ ಕಾಲ್*

ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚಕರ ಜಾಲಕ್ಕೆ ಸಾಮಾನ್ಯ ಜನರಷ್ಟೇ ಅಲ್ಲ, ಸಚಿವರೂ ಟಾರ್ಗೆಟ್ ಆಗುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪ್ರಕರಣಗಳ ಹೆಸರಿನಲ್ಲಿ ಸಚಿವ ಎಂ.ಬಿ. ಪಾಟೀಲರಿಗೂ ಡಿಜಿಟಲ್ ಅರೆಸ್ಟ್ ಮಾಡಲು ವಂಚಕರು ಯತ್ನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಇತ್ತೀಚೆಗೆ ತಮಗೂ ಇಂಟರ್‌ನೆಟ್ ಕಾಲ್ ಮೂಲಕ ವಂಚಕರು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಸಮೀಪದ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ ವಂಚಕರು, ಸಿಬಿಐ ಮತ್ತು ಇಡಿ ಪ್ರಕರಣಗಳಿವೆ ಎಂದು ಬೆದರಿಸಲು ಆರಂಭಿಸಿದ್ದರು. ತಾನು ಸಚಿವ ಎಂದು ತಿಳಿಸಿದರೂ ವಂಚಕರು ಕರೆ ನಿಲ್ಲಿಸಿರಲಿಲ್ಲ.
ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವರ್ಚುವಲ್ ಕರೆಗಳಿಗೆ ನಕಲಿ ಸಂಖ್ಯೆಗಳನ್ನು ಬಳಸುವುದರಿಂದ ವಂಚಕರನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ ಎಂದು ಎಂ.ಬಿ. ಪಾಟೀಲ ವಿವರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಹೀಗಾಗಿ ಸಾರ್ವಜನಿಕರು ಅಪರಿಚಿತ ಕರೆಗಳು ಮತ್ತು ಬೆದರಿಕೆಗಳಿಗೆ ಹೆದರದೆ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.




