Kannada NewsLatestWorld

*ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್ ಗಳು ಡಿಕ್ಕಿಯಾಗಿ ಛಿದ್ರ ಛಿದ್ರ*: *ಭಾರತೀಯ ಪ್ರಜೆ ಸಾವು*

ಪ್ರಗತಿವಾಹಿನಿ ಸುದ್ದಿ: ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್ ಗಳಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನೇಪಾಳದ ಸೋಲುಖುಂಬು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಎರಡು ಹೆಲಿಕಾಪ್ಟರ್ ಗಳ ಅಪಘಾತ ಸಂಭವಿಸಿದೆ. ಖುಂಬು ಪಸಾಂಗ್ ಲಾಮು ಗ್ರಾಮೀಣ ಪುರಸಭೆಯ ವಾರ್ಡ್ 4ರ ಫೆರಿಚೆ ಪ್ರದೇಶದಲ್ಲಿ ಇಳಿಯುವ ವೇಳೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅಪಘಾತದ ಭೀಕರತೆಗೆ ಎರಡೂ ಹೆಲಿಕಾಪ್ಟರ್ ಗಳು ಛಿದ್ರ ಛಿದ್ರಗೊಂಡಿವೆ.

ಘಟನೆಯಲ್ಲಿ ಭಾರತೀಯರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಏರ್ ಡೈನಾಸ್ಟಿ ಮತ್ತು ಫಿಶ್‌ಟೇಲ್ ಏರ್ ಸಂಸ್ಥೆಗಳಿಗೆ ಸೇರಿದ ಹೆಲಿಕಾಪ್ಟರ್‌ಗಳು ಬೆಳಗ್ಗೆ ಸುಮಾರು 8.11ರ ವೇಳೆಗೆ ಅಪಘಾತಕ್ಕೀಡಾಗಿವೆ. ಎರಡೂ ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿದ್ದಾಗ ಡಿಕ್ಕಿ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿ ಮಾಹಿತಿ ನೀಡಿದೆ. ಮೃತ ವಿದೇಶಿ ಪ್ರಜೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡ ಪ್ರಯಾಣಿಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಭು ಏರ್‌ನ ಹೆಲಿಕಾಪ್ಟರ್ ಮೂಲಕ ಲುಕ್ಲಾಗೆ ಕರೆದೊಯ್ಯಲಾಗಿದೆ.

ಹೆಲಿಕಾಪ್ಟರ್ ಅಪಘಾತಕ್ಕೆ ಹವಾಮಾನ, ಗೋಚರತೆ ಅಥವಾ ಲ್ಯಾಂಡಿಂಗ್ ವೇಳೆ ಉಂಟಾದ ತಾಂತ್ರಿಕ ಸಮಸ್ಯೆ ಕಾರಣವೇ ಎಂಬುದನ್ನು ತನಿಖೆಯಿಂದ ತಿಳಿಯಬೇಕಿದೆ.

Related Articles

Back to top button