*ತಾಕತ್ತಿದ್ದರೆ ಅವರು ರಾಜೀನಾಮೆ ನೀಡಿ, ಪಕ್ಷ ಬಿಟ್ಟು ಹೋಗಲಿ*: *ಸವಾಲು ಹಾಕಿದ ಸಚಿವ ಹೆಚ್.ಸಿ.ಬಾಲಕೃಷ್ಣ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್‌ನಿಂದಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಬೇಕಾಯಿತು ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಅವರ ಮಗಾನ ವಿರುದ್ಧ ಸಚಿವ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ್ದ ರಾಜಣ್ಣ, ಸ್ಟಿಂಗ್ ಆಪರೇಷನ್ ವಿಚಾರವಾಗಿ ಮೊಂದೊಂದು ದಿನ ಕರ್ನಾಟಕ ಮಾಡೆಲ್ ಆಗಲಿದೆ. ಅಭಿವೃದ್ಧಿಯಲ್ಲಿ ಗುಜರಾತ್ ಮಾದರಿ ಎನ್ನುತ್ತಾರೆ. ಸ್ಟಿಂಗ್ ನಲ್ಲಿ ಕರ್ನಾಟಕ ಮಾದರಿ ಎನ್ನುವ ಸ್ಥಿತಿ ಬರುತ್ತೆ ಎಂದಿದ್ದರು. ಅಲ್ಲದೇ ವಿಧಾನ ಪರಿಷತ್ ಚುನಾವಣೆ ಸೋಲಿಗೂ ಇದೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆ.ಎನ್.ರಾಜಣ್ಣ ಹೇಳಿಕೆಗೆ ಸಚಿವ ಹೆಚ್.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಬಾಲಕೃಷ್ಣ, ಪಕ್ಷದಲ್ಲೇ ಇದ್ದು ಇಲ್ಲಿನ ಅನ್ನ ತಿಂದು ದ್ರೋಹ ಬಗೆಯುವುದಾದರೆ ಪಕ್ಷ ಬಿಟ್ಟು ಹೋಗಲಿ ಎಂದು ನೇರವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಸ್ಟಿಂಗ್ ವಿಚಾರ ಮಾತನಾಡುವ ಮುನ್ನ, ರಾಜಣ್ಣ ಅವರ ಪುತ್ರ ರಾಜೇಂದ್ರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರಾ ಎಂದು ಮೊದಲು ಕೇಳಿ ಎಂದು ತಿರುಗೇಟು ನೀಡಿದರು.
ಇತ್ತ ಚುನಾವಣೆ ಮುಗಿಯುವುದರೊಳಗೆ ಅತ್ತ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ತಾವು ಕಾಂಗ್ರೆಸ್ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದರು.
ಪಕ್ಷದೊಳಗೆ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು. ತಾಕತ್ತಿದ್ದರೆ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಬಿಟ್ಟು ಹೊರಗೆ ಹೋಗಲಿ. ಪಕ್ಷದ ಅನ್ನ ತಿಂದು ಪಕ್ಷಕ್ಕೇ ದ್ರೋಹ ಬಗೆಯುವುದು ಸರಿಯಲ್ಲ. ಅವರು ಯಾವ ದೇವಸ್ಥಾನಕ್ಕೆ ಕರೆಯುತ್ತಾರೋ ಅಲ್ಲಿಗೆ ನಾನು ಬರಲು ಸಿದ್ಧ, ಪ್ರಮಾಣ ಮಾಡಿ ಸತ್ಯ ಹೇಳುತ್ತೇನೆ. ರಾಜಣ್ಣನವರೂ ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಗುಡುಗಿದ್ದಾರೆ.



