*ನಕಲಿ ಔಷಧಿಗಳ ಜಾಲ*: *5 ಕಡೆ ಇಡಿ ದಾಳಿ*: *9 ಲಕ್ಷ, ಡಿಜಿಟಲ್ ದಾಖಲೆಗಳು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ನಕಲಿ ಔಷಧಿಗಳ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಐದು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿವೆ.
ಪರಿಶೀಲನೆಯ ಸಂದರ್ಭದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವೀರೇಶ್ ಕುಮಾರ್ ಎಂಬಾತನ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 9 ಲಕ್ಷ ರೂಪಾಯಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಲಾಗುತ್ತಿದ್ದ ಡಿಜಿಟಲ್ ಉಪಕರಣಗಳು, ಪ್ರಮುಖ ದಾಖಲೆಗಳು ಹಾಗೂ ಹಲವು ವ್ಯಕ್ತಿಗಳಿಗೆ ಸಂಬಂಧಿಸಿದ ಅಪರಾಧ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಐದು ಪ್ರಮುಖ ಸ್ಥಳಗಳಲ್ಲಿ ಇಡಿ ಅಧಿಕಾಅರಿಗಳು ದಾಳಿ ನಡೆಸಿದರು. ದಾಳಿ ವೇಳೆ ಡಿಜಿಟಲ್ ಉಪಕರಣಗಳು, ಪ್ರಮುಖ ದಾಖಲೆಗಳು ಹಾಗೂ ಹಲವು ವ್ಯಕ್ತಿಗಳಿಗೆ ಸಂಬಂಧಿಸಿದ ಅಪರಾಧ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಕೃತ್ಯದ ರೂವಾರಿ ಆರ್.ಪ್ರಶಾಂತ್ ಬಿಡದಿ ಸಮೀಪದ ಫಾರ್ಮ್ಹೌಸ್ನಲ್ಲಿ ನಕಲಿ ಔಷಧಿಗಳ ತಯಾರಿಕೆ, ಮರುಪ್ಯಾಕಿಂಗ್ ಮತ್ತು ಲೇಬಲ್ ಬದಲಾವಣೆ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದ. ವಿವಿಧ ರಾಜ್ಯಗಳಿಂದ ಕಡಿಮೆ ಬೆಲೆಗೆ ಖರೀದಿಸಿ ತಂದಿದ್ದ ಕಡಿಮೆ ದರ್ಜೆ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ‘ಜಾವಿಸೆಫ್ಟಾ’ (Zavicefta) ಹಾಗೂ ‘ಎಂಬ್ಲಾವಿಯೋ’ (Emblaveo) ಮುಂತಾದ ಖ್ಯಾತ ಫೈಜರ್ (Pfizer) ಪ್ರತಿಜೀವಕಗಳ ಹೆಸರಿನಲ್ಲಿ ಹೊಸ ಸೀಸೆಗಳಲ್ಲಿ ಮರುಪ್ಯಾಕ್ ಮಾಡಲಾಗುತ್ತಿತ್ತು. ಈ ನಕಲಿ ಔಷಧಿಗಳನ್ನು ಮೊದಲು ಡಿಎಂ ಫಾರ್ಮಾಸ್ಯುಟಿಕಲ್ಸ್ ಮೂಲಕ ವಿತರಿಸಿ, ನಂತರ ಕೃಪಾ ಹೆಲ್ತ್ಕೇರ್ ಸಂಸ್ಥೆಗೆ ಪೂರೈಸಲಾಗುತ್ತಿತ್ತು. ಕೃಪಾ ಹೆಲ್ತ್ಕೇರ್ ಸಂಸ್ಥೆ ನಕಲಿ ಔಷಧಿಗಳನ್ನು ಅಸಲಿ ಔಷಧಿಗಳ ಜೊತೆ ಬೆರೆಸಿ ವಿವಿಧ ಔಷಧೀಯ ಘಟಕಗಳು ಹಾಗೂ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ ತಿಂಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹಾಗೂ ದೊಡ್ಡೇರಿ ಭಾಗದ ಫಾರ್ಮ್ಹೌಸ್ ಮತ್ತು ಅನಧಿಕೃತ ಪ್ಯಾಕಿಂಗ್ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪ್ರಸಿದ್ಧ ಬಹುರಾಷ್ಟ್ರೀಯ ಫಾರ್ಮಾ ಕಂಪನಿಗಳು, ಬ್ರ್ಯಾಂಡ್ಗಳ ನಕಲಿ ಲೇಬಲ್ ಹಾಗೂ ಪ್ಯಾಕಿಂಗ್ ಸಾಮಗ್ರಿ ಮತ್ತು ಅಂದಾಜು 4.5 ರಿಂದ 5 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಗಳನ್ನು ಜಪ್ತಿಮಾಡಲಾಗಿತ್ತು.
ತುರ್ತು ನಿಗಾ ಘಟಕಗಳಲ್ಲಿ (ICU) ಗಂಭೀರ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಗಳನ್ನು ಅತ್ಯಂತ ಕಳಪೆ ಮಟ್ಟದಲ್ಲಿ ನಕಲು ತಯಾರಿಸಿ, ಮಾರುಕಟ್ಟೆಗೆ ಹಾಗೂ ವಿವಿಧ ಆಸ್ಪತ್ರೆಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸರಬರಾಜು ಮಾಡುತ್ತಿದ್ದ ಆತಂಕಕಾರಿ ವಿಷಯ ಬೆಳಕಿಗೆ ಬಂದಿತ್ತು. ಆರೋಪಿಗಳು ಅಕ್ರಮ ಹಣ ವರ್ಗಾವಣೆ ನಡೆಸುತ್ತಿರುವ ಆರೋಪದಡಿ ಇಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.




