
ಪ್ರಗತಿವಾಹಿನಿ ಸುದ್ದಿ: ಮೋಟಾರು ವಾಹನ ಕಾಯ್ದೆ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಸಾರಿಗೆ ಹಾಗೂ ಸಾರಿಗೇತರ ವಾಹನಗಳ ಮಾಲೀಕರು ತಮ್ಮ ವಾಹನಗಳ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು. ದಾಖಲೆಗಳಿಲ್ಲದೆ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ವೇಳೆ ಜಪ್ತಿ ಮಾಡುವುದರ ಜತೆಗೆ ದಂಡ ವಿಧಿಸಲಾಗುವುದು ಎಂದು ಬಳ್ಳಾರಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ವಾಹನಗಳು ಅಗತ್ಯ ದಾಖಲೆಗಳನ್ನು ನವೀಕರಿಸದೆ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. ವಿಶೇಷವಾಗಿ ಬಸ್, ಲಾರಿ, ಶಾಲಾ ವಾಹನಗಳು ಸೇರಿದಂತೆ ಹಳದಿ ಬೋರ್ಡ್ ಹೊಂದಿರುವ ಸಾರಿಗೆ ವಾಹನಗಳು ತೆರಿಗೆ ಪಾವತಿಸದೆ ಹಾಗೂ ಅರ್ಹತಾ ಪತ್ರ ನವೀಕರಿಸಿಕೊಳ್ಳದೆ ರಸ್ತೆಗಿಳಿಯುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಾಹನ ಮಾಲೀಕರು ನಿಯಮಗಳನ್ನು ಪಾಲಿಸುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಬಸ್, ಲಾರಿ, ಶಾಲಾ ವಾಹನಗಳು ಹಾಗೂ ಇತರೆ ಸಾರಿಗೆ ವಾಹನಗಳ ಮಾಲೀಕರು ತಮ್ಮ ವಾಹನಗಳ ದಾಖಲೆಗಳನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೊಸ ಸಾರಿಗೆ ವಾಹನಗಳಿಗೆ ಎರಡು ವರ್ಷಕ್ಕೊಮ್ಮೆ ಹಾಗೂ ಹಳೆಯ ವಾಹನಗಳಿಗೆ ಪ್ರತಿ ವರ್ಷ ಅರ್ಹತಾ ಪತ್ರ ನವೀಕರಣ ಮಾಡಿಸಿಕೊಳ್ಳಬೇಕು.
ಇದಕ್ಕಾಗಿ ವಾಹನದ ಚಾಲ್ತಿಯಲ್ಲಿರುವ ವಿಮೆ, ತೆರಿಗೆ ಪಾವತಿ ದಾಖಲೆ, ರಹದಾರಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ವಾಹನವನ್ನು ಹಾಜರುಪಡಿಸಬೇಕು.
ಅರ್ಹತಾ ಪತ್ರ ನವೀಕರಣ ಮಾಡಿಸದೆ ಹಾಗೂ ತೆರಿಗೆ ಪಾವತಿಸದೆ ವಾಹನಗಳನ್ನು ರಸ್ತೆಗಳಲ್ಲಿ ಓಡಿಸುವುದು ಕಂಡುಬಂದರೆ ತಪಾಸಣೆ ವೇಳೆ ಅಂತಹ ವಾಹನಗಳನ್ನು ಜಪ್ತಿ ಮಾಡಿ ದಂಡ ವಿಧಿಸಲಾಗುತ್ತದೆ. ವಾಹನದ ದಾಖಲೆಗಳು ಸರಿಯಾಗಿಲ್ಲದಿದ್ದರೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಿಮಾ ಪರಿಹಾರ ಪಡೆಯುವುದಕ್ಕೂ ತೊಂದರೆಯಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.



