
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದುಬಾರಿ ದುನಿಯಾ ಶುರುವಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಇಂದು ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತೊಂದು ಬರೆ ಎಳೆದಿದೆ.
ಬಸ್ ದರ ಏರಿಕೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬಸ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಸ್ ಗಳಿಗೆ ಡೀಸೆಲ್ ಹಾಕಲೂ ಹಣ ಇರಲಿಲ್ಲ, ತುಂಬಾ ನಷ್ಟ ಆಗಿತ್ತು. ಒಂದೊಂದು ಸ್ಟೇಜ್‌ನಲ್ಲಿ ಎರಡ್ಮೂರು ರೂಪಾಯಿ ಹೆಚ್ಚಿಸಿರಬೇಕು. ಈಗ ಮಾತಾಡುವವರು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಯಾಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಸಿಲಿಂದರ್ ದರ, ಡೀಸೆಲ್ ದರ ಹೆಚ್ಚಾದಾಗ ಯಾಕೆ ಯಾರೂ ಕೇಳಿಲ್ಲ? ಡೀಸೆಲ್ ದರ ಕಡಿಮೆ ಮಾಡಿಸಿ, ನಾವು ಕಡಿಮೆ ಮಾಡಿಸೋಣ. ಕೇಂದ್ರ ಸರ್ಕಾಅರದ ಬಳಿ ಡೀಸೆಲ್ ದರ ಕಡಿಮೆ ಮಾಡಿಸಲು ಹೇಳಿ. ಆಗ ನಾವೂ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದಾರೆ.
“ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದರೆ ಅದಕ್ಕೆ ಅನುಗುಣವಾಗಿ ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸಿದ್ಧ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಪ್ರತಿಪಕ್ಷಗಳು ಗುರುವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಕುರಿತು ಕೇಳಿದಾಗ, “ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಮೂರು ವಾರ ಅಥವಾ ಹತ್ತು ದಿನಗಳ ಮುಂಚಿತವಾಗಿಯೇ ಡೀಸೆಲ್ ಖರೀದಿಸಲು ಹಣವಿಲ್ಲದ ಪರಿಸ್ಥಿತಿ ಎದುರಾಗಿತ್ತು. ಸರಕಾರವೇ ಹಣ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ಹೀಗಾಗಿ ಒಂದೊಂದು ಹಂತದಲ್ಲಿ ಎರಡು, ಮೂರು ರೂಪಾಯಿ ದರ ಹೆಚ್ಚಿಸಿರಬಹುದು” ಎಂದು ಹೇಳಿದರು.
“ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾದಾಗ ವಿಪಕ್ಷಗಳು ಏಕೆ ಮಾತನಾಡಲಿಲ್ಲ? ಅಡುಗೆ ಅನಿಲದ ಬೆಲೆ ಏರಿಕೆಯಾದಾಗ ಏಕೆ ಧ್ವನಿ ಎತ್ತಲಿಲ್ಲ? ರಸಗೊಬ್ಬರ, ಕೀಟನಾಶಕ, ಕಬ್ಬಿಣ, ಸಿಮೆಂಟ್ ಹಾಗೂ ಔಷಧಗಳ ಬೆಲೆ ಹೆಚ್ಚಳದ ಬಗ್ಗೆ ಏಕೆ ಪ್ರತಿಭಟಿಸಲಿಲ್ಲ? ರೈತರು ಬಳಸುವ ಕೃಷಿ ಪರಿಕರಗಳ ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದರ ಬಗ್ಗೆ ವಿಪಕ್ಷಗಳಿಗೆ ಕಾಳಜಿ ಇಲ್ಲವೇ?” ಎಂದು ಪ್ರಶ್ನಿಸಿದರು.
“ರಾಜ್ಯದ ಬರಗಾಲ ಸಂದರ್ಭದಲ್ಲಿ ರೈತರು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬ ಅರಿವು ನನಗಿದೆ. ಅವರ ಬದುಕಿನ ಸಂಕಷ್ಟವೂ ನಮಗೆ ಗೊತ್ತಿದೆ. ಅದೇ ರೀತಿ ಸಾರಿಗೆ ಸಂಸ್ಥೆಗಳೂ ಉಳಿಯಬೇಕು. ಅವುಗಳಿಗೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವಕಾಶ ನೀಡಬೇಕು” ಎಂದು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಸೆಸ್ ಹಾಗೂ ತೆರಿಗೆ ಹೊರೆ ಕಡಿಮೆ ಮಾಡಿಸಲಿ. ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ರಾಜ್ಯ ಸರ್ಕಾರವೂ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಿದೆ” ಎಂದು ವಿಪಕ್ಷಗಳಿಗೆ ಸವಾಲು ಹಾಕಿದರು.
ಹಾಲಿನ ದರ ಏರಿಕೆ ಬಗ್ಗೆ ಸ್ಪಷ್ಟನೆ
ಕೆಲವು ಕಡೆ ಹಾಲಿನ ದರ ಲೀಟರ್ ಗೆ 8 ರೂ. ಬದಲಿಗೆ 12 ರೂ. ಹೆಚ್ಚಳವಾಗಿದೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, “ಹಾಲಿನ ದರದಲ್ಲಿ ವ್ಯತ್ಯಾಸವಾಗಲು ಅದರ ಗುಣಮಟ್ಟ ಹಾಗೂ ಕೊಬ್ಬಿನ ಅಂಶ ಕಾರಣ” ಎಂದು ತಿಳಿಸಿದರು.
“ಎಲ್ಲ ಹಾಲೂ ಒಂದೇ ರೀತಿಯಲ್ಲಿರುವುದಿಲ್ಲ. ಸಾಮಾನ್ಯ ಹಾಲು, ನಾಟಿ ಹಸುವಿನ ಹಾಲು ಹಾಗೂ ಎಮ್ಮೆ ಹಾಲು ಬೇರೆ ಬೇರೆಯಾಗಿರುತ್ತವೆ. ಅವುಗಳ ಕೊಬ್ಬಿನ ಅಂಶವೂ (ಫ್ಯಾಟ್) ವಿಭಿನ್ನವಾಗಿರುತ್ತದೆ. ಈ ವ್ಯತ್ಯಾಸಗಳನ್ನು ಜನರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
ರಾಜಮನೆತನದ ಬಗ್ಗೆ ಗೌರವವಿದೆ
ಮೈಸೂರಿನ ರಾಜಮಾತೆ ಪ್ರಮೋದಾದೇವಿಯವರು ದಸರಾ ಅವ್ಯವಸ್ಥೆಯ ಬಗ್ಗೆ ಸಿಎಂ ಮಾತನಾಡುವುದಾಗಿ ಹೇಳಿದ್ದು ಇನ್ನೂ ಮಾತನಾಡಿಲ್ಲದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ “ಈ ಬಗ್ಗೆ ನನಗೆ ಗೊತ್ತಿಲ್ಲ. ಈ ರಾಜ್ಯದ ರಾಜಮನೆತನಕ್ಕೆ ಗೌರವ ನೀಡುತ್ತೇವೆ. ನೀವು ಹೇಳಿದಿರಿ ಎಂದು ನಿಮ್ಮ ಮಾತುಗಳನ್ನು ಕೇಳುವುದಕ್ಕೆ ಸಾಧ್ಯವಿಲ್ಲ. ಮಾಧ್ಯಮಗಳು ಬೇಕಾದಂತೆ ಕೇಳಿದರೆ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಇದರ ಬಗ್ಗೆ ತಿಳಿದುಕೊಂಡು ಅವರೊಂದಿಗೂ ಮಾತನಾಡುತ್ತೇನೆ” ಎಂದರು.




