Kannada NewsKarnataka NewsLatestPolitics

*ಸಿಎಂ ಎದುರಲ್ಲೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ*: *ಶಿಕ್ಷಕರ ಕಾರ್ಯವೈಖರಿಗೆ ಐಶ್ವರ್ಯಾ ಹೆಗ್ಡೆ ಅಸಮಾಧಾನ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಪುತ್ರಿ ಐಶ್ವರ್ಯಾ ಹೆಗ್ಡೆ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಮುಖರಾಗಿ ವೇದಿಕೆಯಲ್ಲಿ ಭಾಗವಹಿಸಿದ್ದ ಅವರು, ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುವುದರ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ.

ನ್ಯಾಷನಲ್ ಎಜುಕೇಷನ್ ಫೌಂಡೇಶನ್‌ನ ಟ್ರಸ್ಟಿ ಕಾರ್ಯದರ್ಶಿಯೂ ಆಗಿರುವ ಐಶ್ವರ್ಯಾ ಡಿಕೆಎಸ್ ಹೆಗ್ಡೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಗಿಂತಲೂ ಹೆಚ್ಚಾಗಿ ಶಿಕ್ಷಕರ ದಕ್ಷತೆ ಮತ್ತು ಸಂವಹನ ಕೌಶಲ್ಯದ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಕರಿಗೆ ಸೂಕ್ತ ಸಂವಹನ ತರಬೇತಿ ನೀಡುವ ಮೂಲಕ ಈ ಸಮಸ್ಯೆ ನಿವಾರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಶಿಕ್ಷಕರ ಜವಾಬ್ದಾರಿಯ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಲಕ್ಷಕ್ಕೂ ಅಧಿಕ ಸಂಬಳ ನೀಡುತ್ತಿದ್ದರೂ, ತಾವು ಗಮನಿಸಿದ ಶಾಲೆಯೊಂದರಲ್ಲಿ ಶಿಕ್ಷಕರು ವಾರದಲ್ಲಿ ಐದು ದಿನವೂ ಸರಿಯಾಗಿ ಬರುತ್ತಿರಲಿಲ್ಲ ಎಂಬ ಉದಾಹರಣೆ ನೀಡಿದ್ದಾರೆ. ಶಿಕ್ಷಕರ ಹಾಜರಾತಿ ಮತ್ತು ಕಾರ್ಯವೈಖರಿಯ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆ ಇರಬೇಕು. ಒದಗಿಸುವ ಸಂಪನ್ಮೂಲಗಳು ಸರಿಯಾಗಿ ಬಳಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆಯೂ ಅಗತ್ಯ ಎಂದಿದ್ದಾರೆ.

ಶಿಕ್ಷಕರ ಪದೇಪದೆ ವರ್ಗಾವಣೆಯಾಗುವುದನ್ನು ತಡೆಯಬೇಕು. ಕನಿಷ್ಠ ಮೂರು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಾಲೆಗಳಲ್ಲಿ ಕೇವಲ ಪಾಠ ಮತ್ತು ಮಧ್ಯಾಹ್ನದ ಊಟಕ್ಕೆ ಮಾತ್ರ ಆದ್ಯತೆ ನೀಡಬಾರದು. ಮಕ್ಕಳಿಗೆ ಆಟೋಟ ಮತ್ತು ಕ್ರೀಡೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆಗ ಮಕ್ಕಳು ಶಾಲೆಯನ್ನು ಇಷ್ಟಪಟ್ಟು ಬರುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲೆಗೆ ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಪರಿಸ್ಥಿತಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಶಾಲಾ ಕಾರ್ಯನಿರ್ವಹಣೆಯ ಅವಧಿಯಲ್ಲೂ ಸ್ವಲ್ಪ ನಮ್ಯತೆ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಇದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಐಶ್ವರ್ಯಾ ಹೆಗ್ಡೆ ಅವರ ಸಲಹೆಗಳಿಗೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಒಂದೂವರೆ ಲಕ್ಷ ರೂಪಾಯಿವರೆಗೂ ಸಂಬಳ ನೀಡುತ್ತಿದ್ದರೂ ನಿರೀಕ್ಷಿತ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಬಗ್ಗೆ ತಮಗೂ ಬೇಸರವಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

Related Articles

Back to top button