Belagavi NewsBelgaum NewsKannada NewsKarnataka NewsNational

*ದೀಪಾವಳಿ, ಮದುವೆ ಸೀಸನ್ ಹೊತ್ತಲ್ಲೇ ಬಂಗಾರ ಪ್ರಿಯರಿಗೆ ಹಾಲ್‌ಮಾರ್ಕಿಂಗ್ ಶುಲ್ಕ ಹೆಚ್ಚಳದ ಬರೆ*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬ ಹಾಗೂ ಮದುವೆ ಸೀಸನ್ ಸಮೀಪಿಸುತ್ತಿರುವ ಬೆನ್ನಲ್ಲೇ ಚಿನ್ನದ ಆಭರಣ ಖರೀದಿಸುವವರಿಗೆ ಹೆಚ್ಚುವರಿ ವೆಚ್ಚದ ಬಿಸಿ ತಟ್ಟಲಿದೆ. ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಚಿನ್ನದ ಆಭರಣಗಳ ಹಾಲ್‌ಮಾರ್ಕಿಂಗ್ ಶುಲ್ಕವನ್ನು ಶೇ.67ರಷ್ಟು ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಸೆಪ್ಟೆಂಬರ್ 14ರಿಂದಲೇ ಜಾರಿಗೆ ಬಂದಿವೆ.

ಬಿಐಎಸ್ ಪರಿಷ್ಕೃತ ನಿಯಮಗಳ ಪ್ರಕಾರ, ಚಿನ್ನದ ವ್ಯಾಪಾರಿಗಳು ಹಾಲ್‌ಮಾರ್ಕಿಂಗ್ ಕೇಂದ್ರಗಳಿಗೆ ಪ್ರತಿ ಆಭರಣಕ್ಕೆ ಪಾವತಿಸುತ್ತಿದ್ದ 45 ರೂಪಾಯಿ ಶುಲ್ಕವನ್ನು 75 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಆಭರಣಕ್ಕೆ 30 ರೂಪಾಯಿ ಹೆಚ್ಚುವರಿ ವೆಚ್ಚವಾಗಲಿದೆ. ಇದರೊಂದಿಗೆ ಪ್ರತಿ ಕನ್ಸೈನ್‌ಮೆಂಟ್‌ಗೆ ಕನಿಷ್ಠ 200 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

ಇದೇ ವೇಳೆ ಹಾಲ್‌ಮಾರ್ಕಿಂಗ್ ಕೇಂದ್ರಗಳಿಂದಲೂ ಬಿಐಎಸ್ ಪ್ರತಿ ಆಭರಣಕ್ಕೆ 7.50 ರೂಪಾಯಿ ಹಾಗೂ ಪ್ರತಿ ಕನ್ಸೈನ್‌ಮೆಂಟ್‌ಗೆ ಕನಿಷ್ಠ 20 ರೂಪಾಯಿ ಶುಲ್ಕ ವಸೂಲಿ ಮಾಡಲಿದೆ.

ಶುಲ್ಕದಲ್ಲಿ ಶೇಕಡಾವಾರು ಲೆಕ್ಕಾಚಾರದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದರೂ, ಗ್ರಾಹಕರ ಮೇಲೆ ಬೀರುವ ಪರಿಣಾಮ ಅಲ್ಪ ಪ್ರಮಾಣದ್ದಾಗಿದೆ. ಜ್ಯುವೆಲ್ಲರ್ಸ್ ಹೆಚ್ಚುವರಿ ವೆಚ್ಚವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಿದರೂ, ಐದು ಆಭರಣಗಳನ್ನು ಖರೀದಿಸುವವರಿಗೆ ಸುಮಾರು 150 ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಉದಾಹರಣೆಗೆ, ಈ ಹಿಂದೆ ಪ್ರತಿ ಆಭರಣಕ್ಕೆ 45 ರೂಪಾಯಿ ಇದ್ದ ಹಾಲ್‌ಮಾರ್ಕಿಂಗ್ ಶುಲ್ಕ ಇದೀಗ 75 ರೂಪಾಯಿಗೆ ಏರಿಕೆಯಾಗಿರುವುದರಿಂದ 30 ರೂಪಾಯಿ ವ್ಯತ್ಯಾಸವಾಗಲಿದೆ.

ಹಾಲ್‌ಮಾರ್ಕಿಂಗ್ ಏಕೆ ಮುಖ್ಯ?

ಚಿನ್ನದ ಆಭರಣಗಳ ಶುದ್ಧತೆ ಮತ್ತು ಗುಣಮಟ್ಟವನ್ನು ದೃಢೀಕರಿಸುವ ಅಧಿಕೃತ ವ್ಯವಸ್ಥೆಯೇ ಹಾಲ್‌ಮಾರ್ಕಿಂಗ್. ಚಿನ್ನದಲ್ಲಿ ಕಲಬೆರಕೆ ತಡೆಯುವುದು, ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಹಾಗೂ ಆಭರಣಗಳ ನೈಜ ಶುದ್ಧತೆಯನ್ನು ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಹಾಲ್‌ಮಾರ್ಕಿಂಗ್ ಮೂಲಕ 22 ಕ್ಯಾರೆಟ್ ಚಿನ್ನದಲ್ಲಿ ಶೇ.91.6ರಷ್ಟು ಹಾಗೂ 18 ಕ್ಯಾರೆಟ್ ಚಿನ್ನದಲ್ಲಿ ಶೇ.75ರಷ್ಟು ಶುದ್ಧ ಚಿನ್ನವಿರುವುದನ್ನು ದೃಢಪಡಿಸಲಾಗುತ್ತದೆ. ಇದರಿಂದ ಗ್ರಾಹಕರು ಆಭರಣ ಖರೀದಿಸುವಾಗ ಅದರ ಗುಣಮಟ್ಟದ ಬಗ್ಗೆ ವಿಶ್ವಾಸ ಹೊಂದುವುದರ ಜತೆಗೆ, ಮರುಮಾರಾಟದ ಸಂದರ್ಭದಲ್ಲಿಯೂ ಅನುಕೂಲವಾಗಲಿದೆ.

ಆಭರಣ ಖರೀದಿಸುವಾಗ ಎಚ್ಚರಿಕೆ ವಹಿಸಿ

ಗ್ರಾಹಕರು ಚಿನ್ನದ ಆಭರಣ ಖರೀದಿಸುವಾಗ ಬಿಐಎಸ್ ಲಾಂಛನ, ಕ್ಯಾರೆಟ್ ಶುದ್ಧತೆಯ ಗುರುತು ಹಾಗೂ ಆರು ಅಂಕಿಗಳ ವಿಶಿಷ್ಟ ಎಚ್‌ಯುಐಡಿ ಸಂಖ್ಯೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬಿಐಎಸ್ ಕೇರ್ ಮೊಬೈಲ್ ಆ್ಯಪ್ ಮೂಲಕ ಎಚ್‌ಯುಐಡಿ ಸಂಖ್ಯೆಯನ್ನು ನಮೂದಿಸಿ ಆಭರಣದ ನೈಜತೆಯನ್ನು ಖಚಿತಪಡಿಸಿಕೊಳ್ಳಬಹುದು.

ಅಲ್ಲದೆ, ಚಿನ್ನದ ಶುದ್ಧತೆ, ನಿವ್ವಳ ತೂಕ, ತಯಾರಿಕಾ ವೆಚ್ಚ, ಜಿಎಸ್‌ಟಿ ಹಾಗೂ ಹಾಲ್‌ಮಾರ್ಕಿಂಗ್ ಶುಲ್ಕದ ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸಿರುವ ಅಧಿಕೃತ ಬಿಲ್ ಪಡೆಯುವುದು ಅಗತ್ಯ.

ಇನ್ನು ಬೆಳ್ಳಿ ಆಭರಣಗಳ ಹಾಲ್‌ಮಾರ್ಕಿಂಗ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರತಿ ಬೆಳ್ಳಿ ವಸ್ತುವಿಗೆ ಹಿಂದಿನಂತೆಯೇ 35 ರೂಪಾಯಿ ಶುಲ್ಕ ಮುಂದುವರಿಯಲಿದೆ.

ಒಟ್ಟಿನಲ್ಲಿ, ಹಬ್ಬ ಹಾಗೂ ಮದುವೆ ಸೀಸನ್‌ನಲ್ಲಿ ಚಿನ್ನ ಖರೀದಿಸಲು ಸಿದ್ಧತೆ ನಡೆಸುತ್ತಿರುವ ಗ್ರಾಹಕರು ಹಾಲ್‌ಮಾರ್ಕಿಂಗ್ ಶುಲ್ಕದ ಪರಿಷ್ಕೃತ ದರವನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.

Related Articles

Back to top button