Belagavi NewsBelgaum NewsKarnataka NewsPolitics

*ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ದೀಪಾವಳಿ ಗಿಫ್ಟ್*: *ಮುರುಘೇಂದ್ರಗೌಡ ಪಾಟೀಲ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಹಾಲು, ಮೊಸರು, ಬಸ್ ಟಿಕೆಟ್ ಸೇರಿದಂತೆ ಅಗತ್ಯ ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಜನಸಾಮಾನ್ಯರಿಗೆ ದೀಪಾವಳಿ ಉಡುಗೊರೆ ನೀಡಿದೆ ಎಂದು ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರಗಾಲದ ಸಂಕಷ್ಟದಿಂದ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಾದ ಸರಕಾರ, ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಎಂದು ಟೀಕಿಸಿದ್ದಾರೆ.

ರೈತರ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ನಿಜವಾದ ಕಾಳಜಿ ಇದ್ದಿದ್ದರೆ, ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ಒದಗಿಸಬೇಕಿತ್ತು. ಹಾಲು ಉತ್ಪಾದಕರಿಗೆ ಉಂಟಾಗುವ ನಷ್ಟವನ್ನು ಸರಕಾರವೇ ಭರಿಸಬೇಕಿತ್ತು. ಅದನ್ನು ಬಿಟ್ಟು ರೈತರ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದ್ದು, ಈ ಸರಕಾರ ಯಾವಾಗ ತೊಲಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸುವುದಾಗಲಿ, ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಲಿ ಮಾಡದೆ, ಅನಗತ್ಯ ವಿಷಯಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸರಕಾರ ಕೂಡಲೇ ಏರಿಕೆ ಮಾಡಿರುವ ಬೆಲೆಗಳನ್ನು ಹಿಂಪಡೆದು, ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮುರುಘೇಂದ್ರಗೌಡ ಪಾಟೀಲ ಆಗ್ರಹಿಸಿದ್ದಾರೆ.

Related Articles

Back to top button